Friday, 13th December 2024

“ಆಪರೇಷನ್ ಮೇಘದೂತ್” ಪ್ರೇರಕ ಕರ್ನಲ್ ನರೇಂದ್ರ ‘ಬುಲ್’ ಕುಮಾರ್‌ ನಿಧನ

ನವದೆಹಲಿ: ಸಿಯಾಚಿನ್ ಹಿಮನದಿಯ ಸಮೀಕ್ಷೆ ನಡೆಸಿ ಭಾರತೀಯ ಸೈನ್ಯಕ್ಕೆ ಸಹಾಯ ಮಾಡಿದ್ದ ಅಧಿಕಾರಿ ನಿವೃತ್ತ ಕರ್ನಲ್ ನರೇಂದ್ರ ‘ಬುಲ್’ ಕುಮಾರ್(87) ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಕರ್ನಲ್ ನರೇಂದ್ರ ‘ಬುಲ್’ ಕುಮಾರ್ ಈಗ ಪಾಕಿಸ್ತಾನದಲ್ಲಿರುವ ರಾವಲ್ಪಿಂಡಿ ಯಲ್ಲಿ ಜನಿಸಿ ಕುಮೋವಾನ್ ರೆಜಿಮೆಂಟ್‌ಗೆ ಸೇರ್ಪಡೆಯಾಗಿದ್ದರು. ರಹಸ್ಯ ಸಾಹಸ ಯಾತ್ರೆಯ ನಂತರ, ಸಿಯಾಚಿನ್‌ನ ಕಾರ್ಯತಂತ್ರದ ಮಹತ್ವದ ಬಗ್ಗೆ ಕುಮಾರ್ ನೀಡಿದ್ದ ವರದಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ “ಆಪರೇಷನ್ ಮೇಘದೂತ್” ನಡೆಸಲು ಪ್ರೇರಣೆಯಾಗಿತ್ತು.

ಸೈನ್ಯವು ದಂಡಯಾತ್ರೆಯ ಉಡಾವಣಾ ನೆಲೆಯನ್ನು ‘ಕುಮಾರ್ ಬೇಸ್’ ಎಂದು ಹೆಸರಿಸಿರುವುದು ಸೇನಾಧಿಕಾರಿಗೆ ಸಲ್ಲಿಸಿದ ಉತ್ತಮ ಗೌರವವಾಗಿದೆ. 1970 ರ ದಶಕದ ಮಧ್ಯಭಾಗದಲ್ಲಿ ಕುಮಾರ್ ಅವರನ್ನು ಗುಲ್ಮಾರ್ಗ್‌ನ ಹೈ ಆಲ್ಟಿ ಟ್ಯೂಡ್ ವಾರ್‌ಫೇರ್ ಸ್ಕೂಲ್ ಗೆ ಕಳುಹಿಸಲಾಯಿತು. ಅಲ್ಲಿ ಜರ್ಮನಿಯ ಸಂಶೋಧಕನೊಬ್ಬ ಯುಎಸ್ ರಚಿಸಿದ್ದ ಉತ್ತರ ಕಾಶ್ಮೀರದ ನಕಾಶೆಯನ್ನು ತೋರಿಸಿದಾಗ ಅದರಲ್ಲಿ ನಿಯಂತ್ರಣ ರೇಖೆ (ಎಲ್‌ಒಸಿ) ಸಿಯಾಚಿನ್ ಪಾಕಿಸ್ತಾನದಲ್ಲಿದೆ ಎನ್ನುವುದನ್ನು ಬಿಂಬಿಸಲಾಗುತ್ತು.

ಸಿಯಾಚಿನ್ ಗ್ಲೇಸಿಯರ್ ಪಾಯಿಂಟ್ ಎನ್ಜೆ 9842 ರ ಉತ್ತರದಲ್ಲಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ 1949 ರ ಕರಾಚಿ ಒಪ್ಪಂದವು ಪಾಯಿಂಟ್ ಎನ್ಜೆ 9842 ರ ಉತ್ತರದ ಪ್ರದೇಶಗಳನ್ನು ಅಸ್ಪಷ್ಟವಾಗಿ ಗುರುತಿಸಿದೆ. ಆದಾಗ್ಯೂ, ಪಾಕಿಸ್ತಾನದ ತಂತ್ರ ವನ್ನು ಗ್ರಹಿಸಿದ ಭಾರತ, ಆಪರೇಷನ್ ಮೇಘದೂತ್ ಅನ್ನು ಪ್ರಾರಂಭಿಸಿತು ಮತ್ತು ಹಿಮನದಿಯನ್ನು ಆಕ್ರಮಿಸಿತು.