Saturday, 14th December 2024

ಹಿರಿಯ ಕಮ್ಯುನಿಸ್ಟ್ ನಾಯಕ ಡಿ.ಪಾಂಡಿಯಾನ್ ನಿಧನ

ಚೆನ್ನೈ: ಎರಡು ಬಾರಿ ಲೋಕಸಭಾ ಸದಸ್ಯರಾಗಿದ್ದ ಹಿರಿಯ ಕಮ್ಯುನಿಸ್ಟ್ ನಾಯಕ ಡಿ.ಪಾಂಡಿಯಾನ್(88) ಶುಕ್ರವಾರ ಸುದೀರ್ಘ ಅನಾರೋಗ್ಯ ಬಳಿಕ ನಿಧನರಾದರು.

ಪಾಂಡಿಯನ್ ಜನಿಸಿದ್ದು 1932 ರಲ್ಲಿ ಮಧುರೈ ಜಿಲ್ಲೆಯ ಉಸಿಲಂಪಟ್ಟಿ ಬಳಿಯ ಕೀಝವೆಲ್ಲೈಮಲೈಪಟ್ಟಿಯಲ್ಲಿ. 1948ರಲ್ಲಿ ದೇಶದಲ್ಲಿ ಕಮ್ಯೂನಿಸ್ಟ್ ಪಾರ್ಟಿಯನ್ನು ನಿಷೇಧಿಸಿದ್ದಾಗ ಪಾಂಡಿಯಾನ್ ಬಂಧನಕ್ಕೊಳಗಾಗಿದ್ದರು. ಇಂಗ್ಲಿಷ್ ಸಾಹಿತ್ಯದಲ್ಲಿ ಕರೈಕುಡಿಯ ಅಲಗಪ್ಪ ಕಾಲೇಜಿನಿಂದ ಪದವಿ ಮುಗಿಸಿದ ಪಾಂಡಿಯಾನ್ ನಂತರ ಅದೇ ವಿಭಾಗದಲ್ಲಿ ಬೋಧಕರಾಗಿ ಕೆಲಸಕ್ಕೆ ಸೇರಿದ್ದರು. ಅವರ ಪತ್ನಿ ಜಾಯ್ಸ್ ಅದೇ ವಿಭಾಗದಲ್ಲಿ ಶಿಕ್ಷಕಿಯಾಗಿದ್ದರು.

1970ರ ದಶಕದ ಉತ್ತರಾರ್ಧದಲ್ಲಿ ಅವರು ಯುನೈಟೆಡ್ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾವನ್ನು ತೊರೆದು ಎರಡನೇ ಬಾರಿಗೆ ಸಿಪಿಐ ಅನ್ನು ಒಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1990 ರ ದಶಕದ ಉತ್ತರಾರ್ಧದಲ್ಲಿ ಅವರು ತಮ್ಮ ಪಕ್ಷವನ್ನು ಸಿಪಿಐಗೆ ವಿಲೀನಗೊಳಿಸಿದರು. 1989 ಮತ್ತು 1991 ರಲ್ಲಿ ಉತ್ತರ ಚೆನ್ನೈ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.

ಸಿಪಿಐ ರಾಷ್ಟ್ರೀಯ ಸಮಿತಿಯ ಸದಸ್ಯ ಪಾಂಡಿಯಾನ್ ಇಬ್ಬರು ಪುತ್ರಿಯರು ಮತ್ತು ಓರ್ವ ಪುತ್ರ ಪಿ ಜವಾಹರ್ ನನ್ನು ಅಗಲಿದ್ದಾರೆ.