Friday, 13th December 2024

ಕಾಂಗ್ರೆಸ್‌ ನಾಯಕ ಮೋತಿಲಾಲ್‌ ವೋಹ್ರಾ ಇನ್ನಿಲ್ಲ

ನವದೆಹಲಿ: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಮೋತಿ ಲಾಲ್‌ ವೋಹ್ರಾ (93) ನವದೆಹಲಿಯ ಪೋರ್ಟಿಸ್ ಎಸ್ಕಾರ್ಟ್‌ ಆಸ್ಪತ್ರೆ ಯಲ್ಲಿ ನಿಧನ ಹೊಂದಿದರು.

ಹಲವು ವರ್ಷಗಳ ಕಾಲ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ ಮೋತಿಲಾಲ್ ವೋರಾ, ನಂತರ 1968ರಲ್ಲಿ ರಾಜಕೀಯ ಪ್ರವೇಶಿಸಿದರು. 1970ರಲ್ಲಿ ಮಧ್ಯಪ್ರದೇಶ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಮಧ್ಯಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು. 1977 ಮತ್ತು 1980ರಲ್ಲಿ ವಿಧಾನಸಭೆಗೆ ಮರು ಆಯ್ಕೆಗೊಂಡು 1980ರಲ್ಲಿ ಅರ್ಜುನ್ ಸಿಂಗ್ ಸಂಪುಟದಲ್ಲಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು.

1983ರಲ್ಲಿ ಮೋತಿಲಾಲ್ ವೋರಾ ಸಂಪುಟ ದರ್ಜೆ ಸಚಿವರಾದರು ಮತ್ತು ಅವರನ್ನು ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರನ್ನಾಗಿಯೂ ನೇಮಿಸಲಾಗಿತ್ತು. 1985ರ ಫೆಬ್ರವರಿ 13ರಂದು ವೋರಾ ಅವರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಮಾಡಲಾಯಿತು. 1988ರ ಫೆಬ್ರವರಿ 13ರಂದು ಮೋತಿಲಾಲ್ ವೋರಾ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ 1988ರ ಫೆಬ್ರವರಿ 14ರಂದು ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಜವಾಬ್ದಾರಿ ವಹಿಸಿ ಕೊಂಡರು.