Friday, 13th December 2024

ಗುಜರಾತ್‌ನಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ…!

ವದೆಹಲಿ: ಲೋಕಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಪಕ್ಷಕ್ಕೆ ಒಂದರ ಹಿಂದೆ ಒಂದರಂತೆ ಹಿನ್ನಡೆ ಉಂಟಾಗುತ್ತಿದೆ. ಹಿಮಾಚಲ ನಂತರ ಇದೀಗ ಗುಜರಾತ್‌ನಲ್ಲೂ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ.

ಗುಜರಾತ್‌ನಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯ ಪ್ರವೇಶಕ್ಕೆ 3 ದಿನಗಳು ಬಾಕಿ ಇರುವಾಗ ಮೂವರು ಮಾಜಿ ಶಾಸಕರು ಪಕ್ಷ ತೊರೆದಿದ್ದಾರೆ.

ಪಕ್ಷದ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಅಂಬರೀಶ್ ದೇರ್ ಮತ್ತು ಹಿರಿಯ ನಾಯಕ ಮುಲು ಭಾಯ್ ಕಂಡೋರಿಯಾ ಹಾಗೂ ಮಾಜಿ ಶಾಸಕ ಅರ್ಜುನ್ ಮೊದ್ವಾಡಿಯಾ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.

ಅರ್ಜುನ್ ಮೊದ್ವಾಡಿಯಾ, ಅಂಬ್ರಿಶ್ ದೇರ್ ಮತ್ತು ಮುಲು ಭಾಯ್ ಕಂಡೋರಿಯಾ ಮಂಗಳವಾರ ಬಿಜೆಪಿ ಸೇರಲಿದ್ದು, ಮಧ್ಯಾಹ್ನ ರಾಜ್ಯಾಧ್ಯಕ್ಷ ಸಿ.ಆರ್.ಪಾಟೀಲ್ ಸಮ್ಮುಖದಲ್ಲಿ ಮೂವರೂ ಮುಖಂಡರು ಬಿಜೆಪಿ ಸೇರಲಿದ್ದಾರೆ.

ಕಾಂಗ್ರೆಸ್ ತೊರೆಯುವ ಮೊದಲು, ಅರ್ಜುನ್ ಮೊದ್ವಾಡಿಯಾ ಅವರು ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ ಬಹಿಷ್ಕರಿಸುವುದಾಗಿ ಕಾಂಗ್ರೆಸ್ ಘೋಷಿಸಿದ ಪಕ್ಷದ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದರು. ವಿಶೇಷ ಅಂದ್ರೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆ ಗುಜರಾತ್ ರಾಜ್ಯಕ್ಕೆ ಕಾಲಿಡುವ ಮುನ್ನವೇ ಮಾಜಿ ಶಾಸಕರು ಬಿಜೆಪಿ ಸೇರಲು ತೀರ್ಮಾನಿಸಿರುವುದು ಅಚ್ಚರಿ ಮೂಡಿಸಿದೆ. ಕೆಲ ದಿನಗಳ ಹಿಂದೆ ಕೇಂದ್ರದ ಮಾಜಿ ಸಚಿವ ನರನ್ ರಥ್ವಾ ಅವರು ತಮ್ಮ ಪುತ್ರ ಹಾಗೂ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಬಿಜೆಪಿ ಸೇರಲಿರುವ ಅರ್ಜುನ್ ಮೊದ್ವಾಡಿಯಾ ಅವರು ಮುಂಬರುವ ಲೋಕಸಭೆ ಚುನಾವಣೆ ಜತೆಗೆ ನಡೆಯಲಿರುವ ವಿಧಾನಸಭಾ ಉಪಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಮೊದ್ವಾಡಿಯಾ ಅವರು ಮಾಜಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಎರಡು ಬಾರಿ ಶಾಸಕರಾಗಿದ್ದರು. ಅವರು 2022ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಮೂರನೇ ಬಾರಿಗೆ ಗೆದ್ದಿದ್ದರು.

ಜನವರಿಯಲ್ಲಿ ಕಾಂಗ್ರೆಸ್‌ನ ಹಿರಿಯ ಶಾಸಕ ಸಿಜೆ ಚಾವ್ಡಾ ಅವರು ಪಕ್ಷಕ್ಕೆ ರಾಜೀನಾಮೆ ರಾಜೀನಾಮೆ ನೀಡಿದ್ದರು. ಚಾವಡಾ ಅವರು ವಿಜಾಪುರ ಕ್ಷೇತ್ರದ ಶಾಸಕರಾಗಿದ್ದರು. ಇದಕ್ಕೂ ಮುನ್ನ ಖಂಭತ್ ಕ್ಷೇತ್ರದ ಶಾಸಕ ಚಿರಾಗ್ ಪಟೇಲ್ ಕಾಂಗ್ರೆಸ್ ತೊರೆದಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಅಮಿತ್ ಶಾ ವಿರುದ್ಧ ಗಾಂಧಿನಗರ ಕ್ಷೇತ್ರದಿಂದ ಸಿಜೆ ಚಾವ್ಡಾ ಸ್ಪರ್ಧಿಸಿದ್ದರು. ಸಿಜೆ ಚಾವ್ಡಾ ಅವರನ್ನು ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ಬಘೇಲಾ ಅವರ ನಿಕಟವರ್ತಿ ಎಂದು ಪರಿಗಣಿಸಲಾಗಿದೆ.