ಉತ್ತರಾಖಂಡ: ವನ್ಯಜೀವಿ ಸಂರಕ್ಷಣೆಗಾಗಿ (Wildlife Conservation) ಉತ್ತರಾಖಂಡದ (Uttarakhand) ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ (Corbett National Park) ಅಳವಡಿಸಲಾಗಿರುವ ಕೆಮರಾ ಮತ್ತು ಡ್ರೋನ್‌ಗಳನ್ನು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಒಪ್ಪಿಗೆಯಿಲ್ಲದೆ ಮಹಿಳೆಯರನ್ನು ವೀಕ್ಷಿಸಲು ಉದ್ದೇಶಪೂರ್ವಕವಾಗಿ ದುರ್ಬಳಕೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಭಾರತದ ಪ್ರಸಿದ್ಧ ಹುಲಿ ಸಂರಕ್ಷಿತ ಪ್ರದೇಶದ ಸಮೀಪ ವಾಸಿಸುವ ಸ್ಥಳೀಯ ಮಹಿಳೆಯರು ವನ್ಯಜೀವಿ ಸಂರಕ್ಷಣೆಯ ನೆಪದಲ್ಲಿ ತಮ್ಮ ಚಲನವಲನಗಳನ್ನು ವೀಕ್ಷಿಸಲಾಗುತ್ತಿದೆ ಎನ್ನುತ್ತಿದ್ದಾರೆ. ಈ ಮಹಿಳೆಯರಿಗೆ ಅರಣ್ಯವು ಅವರ ಜೀವನ ಅವಿಭಾಜ್ಯ ಅಂಗ ಎನಿಸಿಕೊಂಡಿದೆ.
ವನ್ಯಜೀವಿ ಸಂರಕ್ಷಣೆಗಾಗಿ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಅಳವಡಿಸಿರುವ ಕೆಮರಾ ಮತ್ತು ಡ್ರೋನ್‌ಗಳನ್ನು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಒಪ್ಪಿಗೆಯಿಲ್ಲದೆ ಮಹಿಳೆಯರನ್ನು ವೀಕ್ಷಿಸಲು ದುರ್ಬಳಕೆ ಮಾಡುತ್ತಿದ್ದಾರೆ ಎನ್ನುವುದು ಅಧ್ಯಯನದಿಂದಲೂ ತಿಳಿದು ಬಂದಿದೆ. ಆದರೆ ಸರ್ಕಾರವು ಈ ಆರೋಪಗಳನ್ನು ನಿರಾಕರಿಸಿದ್ದು, ಅಧ್ಯಯನದ ಹಕ್ಕನ್ನು ಪರಿಶೀಲಿಸಲು ತನಿಖೆಗೆ ಆದೇಶಿಸಿದೆ.
This is concerning and should be addressed quickly. Local community confidence is important for conservation-
— Gargi Rawat (@GargiRawat) November 30, 2024
Wildlife Cameras Surveil Women Without Consent In Corbett: Study #Corbett https://t.co/tUc8XgcMHH
ಅರಣ್ಯ ಆಡಳಿತಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳ ಬಳಕೆಯು ಈ ಕಾಡುಗಳನ್ನು ಪುರುಷ ಪ್ರಧಾನ ಸ್ಥಳಗಳಾಗಿ ಪರಿವರ್ತಿಸಿದೆ ಎಂದು ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಮುಖ ಲೇಖಕ ತ್ರಿಶಾಂತ್ ಸಿಮ್ಲೈ ಹೇಳಿದ್ದಾರೆ.
ಯುಕೆಯ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಂಶೋಧಕರಾದ ಸಿಮ್ಲೈ, ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತಲಿನ ಹಲವಾರು ಮಹಿಳೆಯರು ಸೇರಿದಂತೆ 270 ನಿವಾಸಿಗಳನ್ನು ಸಂದರ್ಶಿಸಲು 14 ತಿಂಗಳು ತೆಗೆದುಕೊಂಡರು.
ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಮತ್ತು ಅರಣ್ಯ ಉತ್ಪನ್ನ ಸಂಗ್ರಾಹಕರೊಂದಿಗಿನ ಸಂದರ್ಶನ ನಡೆಸಿದ ಅವರು, ಕೆಲವು ಅರಣ್ಯ ಸಿಬ್ಬಂದಿ ರಹಸ್ಯವಾಗಿ ಕೆಮರಾಗಳನ್ನು ಬಂಡೆ, ಹುಲ್ಲು ಹಾಸಿನ ಪ್ರದೇಶಗಳ ಮೇಲೆ ಕಣ್ಗಾವಲು ಇಡಲು ಬಳಸುತ್ತಾರೆ. ಮಹಿಳೆಯರು ಹೆಚ್ಚಾಗಿ ಈ ಪ್ರದೇಶಗಳಲ್ಲಿ ಒಣ ಕಟ್ಟಿಗೆಗಳನ್ನು ತರಲು ಹೋಗುತ್ತಾರೆ ಎಂದು ಅವರು ಹೇಳಿದ್ದಾರೆ.
2017ರಲ್ಲಿ,ಅಂತಹ ಒಂದು ಕೆಮರಾ ಟ್ರ್ಯಾಪ್‌ನಲ್ಲಿಮಹಿಳೆಯರ ಕೆಲವು ಖಾಸಗಿ ಚಿತ್ರಗಳನ್ನು ಸೆರೆ ಹಿಡಿದಿರುವುದು ತಿಳಿದು ಬಂದಿತ್ತು. ತಾತ್ಕಾಲಿಕ ಅರಣ್ಯ ಸಿಬ್ಬಂದಿಯಾಗಿ ನೇಮಕಗೊಂಡ ಕೆಲವು ಯುವಕರು ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಬಳಿಕ ಸ್ಥಳೀಯರು ಹಲವು ಕೆಮಾರಗಳನ್ನು ನಾಶಪಡಿಸಿದರು.
ಮಹಿಳೆಯರು ಕಾಡಿನಲ್ಲಿ ಶೌಚಾಲಯಕ್ಕೆ ಹೋಗುತ್ತಿರುವ ಅನೇಕ ಚಿತ್ರಗಳನ್ನು ವನ್ಯಜೀವಿಗಳ ಮೇಲ್ವಿಚಾರಣೆಗಾಗಿ ಇರುವ ಕೆಮರಾದಲ್ಲಿ ಸೆರೆಯಾಗಿದೆ. ಉದ್ದೇಶಪೂರ್ವಕ ಕಿರುಕುಳ ನೀಡಲು ಇದನ್ನು ಸ್ಥಳೀಯ ಫೇಸ್‌ಬುಕ್ ಮತ್ತು ವಾಟ್ಸಾಪ್ ಗ್ರೂಪ್ ಗಳಿಗೆ ಹಂಚಿಕೊಳ್ಳಲಾಗಿದೆ ಎಂದು ಸಿಮ್ಲೈ ತಿಳಿಸಿದ್ದರು.
ಅರಣ್ಯ ರಕ್ಷಕರು ಉದ್ದೇಶಪೂರ್ವಕವಾಗಿ ಸ್ಥಳೀಯ ಮಹಿಳೆಯರು ಸಾಗುತ್ತಿರುವ ಪ್ರದೇಶಗಳಲ್ಲಿ ಡ್ರೋನ್‌ಗಳನ್ನು ಹಾರಿಸಿ ಅವರನ್ನು ಕಾಡಿನಿಂದ ಹೊರಗೆ ಓಡಿಸುತ್ತಾರೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂಗ್ರಹಿಸುವುದನ್ನು ತಡೆಯುತ್ತಾರೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.
ವನ್ಯಜೀವಿಗಳನ್ನು ಮೇಲ್ವಿಚಾರಣೆ ಮಾಡಲು ಹಾಕಿರುವ ಡಿಜಿಟಲ್ ತಂತ್ರಜ್ಞಾನಗಳಿಂದ ನಮ್ಮನ್ನು ಬೆದರಿಸಲು , ಮೇಲ್ವಿಚಾರಣೆ ಮಾಡಲು ಬಳಸುತ್ತಿದ್ದಾರೆ ಎಂಬುದಾಗಿ ಅನೇಕ ಮಹಿಳೆಯರು ಹೇಳಿದ್ದಾರೆ. ಕೆಮರಾಗಳ ನಿಯೋಜನೆಯು ಮಹಿಳೆಯರಿಗೆ ಅಪಾಯಕಾರಿ ಆಗುತ್ತಿದೆ. ಯಾಕೆಂದರೆ ಇದರಿಂದ ತಪ್ಪಿಸಿಕೊಳ್ಳಲು ಅವರು ಹೆಚ್ಚು ದಟ್ಟವಾದ ಮತ್ತು ಕಾಡಿನ ಪರಿಚಯವಿಲ್ಲದ ಪ್ರದೇಶಗಳಿಗೆ ಹೋಗುತ್ತಿದ್ದಾರೆ. ಇದು ಕಾಡು ಪ್ರಾಣಿಗಳೊಂದಿಗೆ ಅವರ ಮುಖಾಮುಖಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ.
ಈ ಸಂಶೋಧನೆಯು ಸಂರಕ್ಷಣಾ ವಿಚಾರದಲ್ಲಿ ಸಾಕಷ್ಟು ಕೋಲಾಹಲವನ್ನು ಉಂಟು ಮಾಡಿದೆ. ವನ್ಯಜೀವಿಗಳನ್ನು ಮೇಲ್ವಿಚಾರಣೆ ಮಾಡಲು ತಂತ್ರಜ್ಞಾನಗಳನ್ನು ಬಳಸುವುದು ತುಂಬಾ ಸಾಮಾನ್ಯ. ಇದು ಯಾರಿಗೂ ಹಾನಿಯನ್ನು ಉಂಟುಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂಬುದಾಗಿ ಸಂರಕ್ಷಣಾ ಸಾಮಾಜಿಕ ವಿಜ್ಞಾನಿ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಸಂರಕ್ಷಣೆ ಮತ್ತು ಸಮಾಜದ ಪ್ರಾಧ್ಯಾಪಕ, ಸಹ-ಲೇಖಕ ಕ್ರಿಸ್ ಸ್ಯಾಂಡ್‌ಬ್ರೂಕ್ ಹೇಳಿದ್ದಾರೆ.
CBI raid: ಅಫೀಮು ಕೃಷಿ ಪರವಾನಿಗೆ ನೀಡಲು ಲಂಚ ಕೇಳಿದ ಅಧಿಕಾರಿ CBI ಬಲೆಗೆ
ತನಿಖೆ ನಡೆಸಲಾಗುವುದು
ಈ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಉತ್ತರಾಖಂಡದ ಮುಖ್ಯ ವನ್ಯಜೀವಿ ವಾರ್ಡನ್ ಆರ್.ಕೆ. ಮಿಶ್ರಾ, ಕೆಮರಾಗಳ ಉದ್ದೇಶ ಯಾರ ಗೌಪ್ಯತೆಯನ್ನು ಉಲ್ಲಂಘಿಸುವುದಿಲ್ಲ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ, ಗ್ರಾಮಸ್ಥರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.