Friday, 13th December 2024

ಭ್ರಷ್ಟಾಚಾರ ತಡೆಗಟ್ಟಲು ಮಾ.23ರಂದು ಹೆಲ್ಪ್’ಲೈನ್’ಗೆ ಚಾಲನೆ

ನವದೆಹಲಿ: ನೂತನವಾಗಿ ಪಂಜಾಬ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಭಗವಂತ್ ಮಾನ್ ಅವರು ಭ್ರಷ್ಟಾಚಾರದ ವಿರುದ್ಧ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಮಾ.23 ರಂದು ಭ್ರಷ್ಟಾಚಾರ ತಡೆ ಗಟ್ಟುವ ನಿಟ್ಟಿನಲ್ಲಿ ಹೆಲ್ಪ್ ಲೈನ್ ಗೆ ಚಾಲನೆ ನೀಡಲಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಸಹಾಯವಾಣಿ ಸಂಖ್ಯೆ ನನ್ನ ವೈಯಕ್ತಿಕ ನಂಬರ್ ಆಗಿರುತ್ತದೆ. ಯಾರಾದರೂ ಲಂಚ ಕೇಳಿದರೆ ಆ ನಂಬರ್‌ಗೆ ಆಡಿಯೋ ಮತ್ತು ವಿಡಿಯೋ ಕಳುಹಿಸಿ ಎಂದು ಮಾನ್ ವಿನಂತಿಸಿ ಕೊಂಡಿದ್ದಾರೆ.

‘ನಾನು ಯಾವುದೇ ಸರ್ಕಾರಿ ನೌಕರರಿಗೆ ಬೆದರಿಕೆ ಹಾಕುವುದಿಲ್ಲ. ಆದರೆ ಅಂತಹ ಉದ್ಯೋಗಿಗಳಲ್ಲಿ ಶೇ.1 ರಷ್ಟು ನೌಕರರು ಭ್ರಷ್ಟರಾಗಿದ್ದಾರೆ. ಅದು ವ್ಯವಸ್ಥೆಯನ್ನು ಕೊಳೆತಗೊಳಿಸಿದೆ. ಎಎಪಿ ಮಾತ್ರ ಭ್ರಷ್ಟ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸಾಧ್ಯ” ಎಂದು ಟ್ವೀಟ್‌ ಮಾಡಿದ್ದಾರೆ.

ಜನರು ತಮ್ಮ ದಿನನಿತ್ಯದ ಕೆಲಸಕ್ಕಾಗಿ ಲಂಚ ಕೇಳುವ ಅಥವಾ ಇತರ ದುಷ್ಕೃತ್ಯ ಗಳಲ್ಲಿ ತೊಡಗಿರುವ ಭ್ರಷ್ಟ ಅಧಿಕಾರಿಗಳ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಈ ಸಂಖ್ಯೆಯು ಪ್ರತ್ಯೇಕವಾಗಿರುತ್ತದೆ. ಅಂತಹ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಲಾಗು ವುದು ಎಂದು ಹೇಳಿದರು.

ಫೆಬ್ರವರಿ 5 ರಂದು ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಎಎಪಿ ಸರ್ಕಾರ ರಚನೆಯಾದರೆ ಸರ್ಕಾರಿ ಉದ್ಯೋಗಗಳಲ್ಲಿನ ಭ್ರಷ್ಟಾಚಾರವನ್ನು ಕೊನೆಗೊಳಿಸುವುದಾಗಿ ಭರವಸೆ ನೀಡಿದ್ದರು.