ಮುಂಬೈ: ʼʼಮಹಿಳೆಯರ ಸುರಕ್ಷತೆಗೆ ಭಾರತದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಮಹಿಳೆಯರ ವಿರುದ್ಧದ ಅಪರಾಧಗಳು ಕ್ಷಮಿಸಲಾಗದ ಪಾಪ ಎಂದು ನಾನು ರಾಜ್ಯ ಸರ್ಕಾರಗಳಿಗೆ ಪದೇ ಪದೆ ಹೇಳುತ್ತಿದ್ದೇನೆʼʼ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
ಮಹಾರಾಷ್ಟ್ರದ ಜಲ್ಗಾಂವ್‌ನಲ್ಲಿ ನಡೆದ ಲಕ್‌ಪತಿ ದೀದಿ ಸಮ್ಮೇಳನದಲ್ಲಿ ಮಾತನಾಡಿದ ಮೋದಿ, ‘ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಶಕ್ತಿಯನ್ನು ಹೆಚ್ಚಿಸುವುದರ ಜತೆಗೆ ಅವರ ಸುರಕ್ಷತೆಯ ಬಗ್ಗೆಯೂ ದೇಶ ಗಮನ ಹರಿಸುತ್ತದೆ. ಮಹಿಳೆಯರ ಸುರಕ್ಷತೆ ಬಗ್ಗೆ ನಾನು ಕೆಂಪು ಕೋಟೆಯಿಂದ ಪದೇ ಪದೆ ಹೇಳುತ್ತಿದ್ದೇನೆ. ಮಹಿಳೆಯರ ಮೇಲಿನ ಅಪರಾಧವು ಕ್ಷಮಿಸಲಾಗದ ಪಾಪ ಎನ್ನುವುದನ್ನು ನಾನು ಮತ್ತೊಮ್ಮೆ ದೇಶದ ಪ್ರತಿಯೊಂದು ರಾಜಕೀಯ ಪಕ್ಷಕ್ಕೆ, ಪ್ರತಿ ರಾಜ್ಯ ಸರ್ಕಾರಕ್ಕೆ ನೆನಪಿಸುತ್ತಿದ್ದೇನೆ’ ಎಂದು ಎಚ್ಚರಿಸಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯೊಬ್ಬರು ಅತ್ಯಾಚಾರಕ್ಕೆ ಒಳಗಾಗಿ ಕ್ರೂರ ವಾಗಿ ಹತ್ಯೆಗೀಡಾದ ಪ್ರಕರಣ ದೇಶಾದ್ಯಂತ ಸಂಸಚಲ ಸೃಷ್ಟಿಸಿದ್ದು ಇದನ್ನು ವಿರೋಧಿಸಿ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆ ಯಲ್ಲಿ ಪ್ರಧಾನಿ ಮಹಿಳೆಯರ ಸುರಕ್ಷತೆಗೆ ಬಗ್ಗೆ ಭರವಸೆ ನೀಡಿದ್ದಾರೆ.