Friday, 13th December 2024

ಬಾಂಬ್ ದಾಳಿಯಲ್ಲಿ ಸಿಆರ್‌ಪಿಎಫ್’ನ ಇಬ್ಬರು ಸಿಬ್ಬಂದಿ ಸಾವು

ಇಂಫಾಲ್: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಕುಕಿ ಉಗ್ರಗಾಮಿಗಳು ನಡೆಸಿದ ಬಾಂಬ್ ದಾಳಿಯಲ್ಲಿ ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಆರ್‌ಪಿಎಫ್‌ನ 128 ಬೆಟಾಲಿಯನ್‌ನ ಸಿಬ್ಬಂದಿಯನ್ನು ಬಿಷ್ಣುಪುರ ಜಿಲ್ಲೆಯ ನರನ್ಸೇನಾ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು. ಕುಕಿ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ ಎಂದು ಮಣಿಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಮ್ನಾಪೊಕ್ವಿಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಮತಗಟ್ಟೆ ಬಳಿ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ ಮತದಾರರನ್ನು ಓಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದರು. ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಕರೆಸಲಾಯಿತು ಎಂದು ಅವರು ತಿಳಿಸಿದ್ದರು.

ಇಂಫಾಲ್‌ ಪಶ್ಚಿಮ ಜಿಲ್ಲೆಯ ಉರಿಪೋಕ್‌ ಮತ್ತು ಇರೊಯಿಶೆಂಬಾದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ನಿರ್ದಿಷ್ಟ ರಾಜಕೀಯ ಪಕ್ಷದ ಚುನಾವಣಾ ಏಜೆಂಟ ರನ್ನು ಬೆದರಿಸಿ, ಮತಗಟ್ಟೆಗಳಿಂದ ಹೊರ ಹೋಗುವಂತೆ ಹೆದರಿಸಿದರು ಎಂದು ಮಾಹಿತಿ ನೀಡಿದ್ದರು.

ಇರೊಯಿಶೆಂಬಾದಲ್ಲಿ ಮತಗಟ್ಟೆಗಳಲ್ಲಿನ ಚುನಾವಣಾ ಸಾಮಗ್ರಿಗಳು ಮತ್ತು ಸಲಕರಣೆಗಳನ್ನು ನಾಶಪಡಿಸಿರುವ ಘಟನೆ ನಡೆದಿತ್ತು.

ಇಂಫಾಲ್‌ ಪೂರ್ವ ಜಿಲ್ಲೆಯ ಖೋಂಗ್‌ಮನ್‌ ವಲಯ 4ರಲ್ಲಿ ಮತದಾರರು ಮತ್ತು ಅಪರಿಚಿತ ವ್ಯಕ್ತಿಗಳ ನಡುವೆ ವಾಗ್ವಾದ ನಡೆದು, ಇವಿಎಂಗಳು ಹಾನಿಯಾಗಿದ್ದವು. ಕೀರಾವೊ ವ್ಯಾಪ್ತಿಯ ಕಿಯಾಮ್‌ಗೆಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಖಾಲಿ ಗುಂಡುಗಳನ್ನು ಹಾರಿಸಿ, ಮತಗಟ್ಟೆಗಳಿಂದ ಕಾಂಗ್ರೆಸ್‌ ಏಜೆಂಟರನ್ನು ಬೆದರಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.