Friday, 13th December 2024

ಕಲ್ಲು ತೂರಾಟ: ಅಮರಾವತಿಯಲ್ಲಿ ಕರ್ಫ್ಯೂ

ಮುಂಬೈ: ಕಳೆದ ಶುಕ್ರವಾರ ಹಾಗೂ ಶನಿವಾರ ಸಂಭವಿಸಿದ ಕಲ್ಲು ತೂರಾಟದ ಘಟನೆಗಳ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಅಮರಾವತಿಯಲ್ಲಿ ಶನಿವಾರ ಕರ್ಫ್ಯೂ ವಿಧಿಸಲಾಗಿದೆ.

ನಗರ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೆ ಬಂದಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ ಎಂದು ಅಮರಾವತಿ ಪೊಲೀಸ್ ಕಮಿಷನರೇಟ್ ಶನಿವಾರ ಹೊರಡಿಸಿದೆ.

ಶನಿವಾರ ಬೆಳಗ್ಗೆ ಅಮರಾವತಿ ನಗರದ ವಿವಿಧೆಡೆ ಬಿಜೆಪಿ ಆಯೋಜಿಸಿದ್ದ ಬಂದ್ ವೇಳೆ ಗುಂಪೊಂದು ಕಲ್ಲು ತೂರಾಟ ನಡೆಸಿ ಅಂಗಡಿಗಳಿಗೆ ಹಾನಿ ಮಾಡಿದ್ದು, ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತ್ರಿಪುರಾ ಕೋಮುಗಲಭೆ ವಿರೋಧಿಸಿ ಮುಸ್ಲಿಂ ಸಂಘಟನೆಗಳು ನಡೆಸಿದ ರ್ಯಾಲಿಯಲ್ಲಿ ಅಮರಾವತಿಯಲ್ಲಿ ಶುಕ್ರವಾರ ಕಲ್ಲು ತೂರಾಟದ ಘಟನೆಗಳು ನಡೆದಿದೆ ಎಂದು ಆರೋಪಿಸಿ ಬಂದ್‌ಗೆ ಕರೆ ನೀಡಲಾಗಿತ್ತು.

ಶುಕ್ರವಾರ ಎಂಟು ಸಾವಿರಕ್ಕೂ ಹೆಚ್ಚು ಜನರು ಅಮರಾವತಿ ಜಿಲ್ಲಾಧಿಕಾರಿಗಳ ಕಚೇರಿಯ ಹೊರಗೆ ಜಮಾಯಿಸಿ ಅಲ್ಪಸಂಖ್ಯಾತ ಸಮುದಾಯದ ಮೇಲಿನ ದೌರ್ಜನ್ಯವನ್ನು ತಡೆಯಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಟ್ವಾಲಿ ಪೊಲೀಸರು ಗಲಭೆ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಇದುವರೆಗೆ 11 ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಹತ್ತು ಜನರನ್ನು ಬಂಧಿಸಲಾಗಿದೆ.