Monday, 9th December 2024

Cyber ​​Crime: ನಿಮ್ಮ ವಾಟ್ಸಾಪ್‌ನಲ್ಲಿ ಮದುವೆಯ ಆಮಂತ್ರಣ ಬಂದರೆ ಹುಷಾರ್‌! ಹೇಗೆ ಮೋಸ ನಡೆಯುತ್ತದೆ ನೋಡಿ!

Cyber ​​Crime

ಅಪರಿಚಿತ ಸಂಖ್ಯೆಗಳಿಂದ ಬರುವ ವಿಶೇಷ ಆಮಂತ್ರಣ ಪತ್ರಿಕೆಗಳ (Wedding Invitation Scam) ಬಗ್ಗೆ ಎಚ್ಚರಿಕೆ ವಹಿಸುವಂತೆ ಹಿಮಾಚಲ ಪ್ರದೇಶದ (Himachal pradesh) ಸೈಬರ್ (Cyber ​​Crime) ಪೊಲೀಸರು ಸೂಚಿಸಿದ್ದಾರೆ. ಈ ಬಗ್ಗೆ ಅವರು ಎಚ್ಚರಿಕೆಯನ್ನು ನೀಡಿದ್ದು, ಅಪರಿಚಿತ ಸಂಖ್ಯೆಗಳಿಂದ ವಿಶೇಷವಾಗಿ ಲಗತ್ತುಗಳನ್ನು ಹೊಂದಿರುವ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ ಎಂದು ಹೇಳಿದ್ದಾರೆ. ದೇಶಾದ್ಯಂತ ಈಗ ಮದುವೆಯ ಸೀಸನ್ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ವೆಚ್ಚದಾಯಕವಾದ ಸಾಂಪ್ರದಾಯಿಕ ಪೇಪರ್ ಕಾರ್ಡ್‌ಗಳಿಗೆ ಬದಲಾಗಿ ವಾಟ್ಸ್ ಆಪ್ ಕಾರ್ಡ್‌ಗಳನ್ನು ಹೆಚ್ಚಾಗಿ ಮಾಡಲಾಗುತ್ತಿದೆ. ಇದು ಈಗ ಹೊಸ ಹಗರಣಕ್ಕೆ ಕಾರಣವಾಗಿದೆ.

ಸೈಬರ್ ವಂಚಕರು ಫೋನ್‌ಗೆ ಕಳುಹಿಸುವ ಮದುವೆಯ ಆಮಂತ್ರಣವು ಸೈಬರ್ ದಾಳಿಗೆ ಕಾರಣವಾಗುತ್ತಿದೆ. ಈ ಮೂಲಕ ಬಳಕೆದಾರರ ಮೊಬೈಲ್ ಮತ್ತು ವೈಯಕ್ತಿಕ ಡೇಟಾವನ್ನು ಕದಿಯಲಾಗುತ್ತದೆ.ಹಿಮಾಚಲ ಪ್ರದೇಶದ ಪೊಲೀಸ್ ಅಧಿಕಾರಿಗಳ ಪ್ರಕಾರ, ವಂಚಕರು ಈಗ ಎಪಿಕೆ ಫೈಲ್‌ಗಳ ರೂಪದಲ್ಲಿ ವಾಟ್ಸ್ ಆಪ್ ಮೂಲಕ ದುರುದ್ದೇಶಪೂರಿತ ಮದುವೆಯ ಆಮಂತ್ರಣಗಳನ್ನು ಕಳುಹಿಸುತ್ತಿದ್ದಾರೆ. ಇದನ್ನು ಸ್ವೀಕರಿಸುವವರು ಈ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿದಾಗ ಅವರ ಫೋನ್‌ಗಳು ಹ್ಯಾಕ್ ಆಗುತ್ತವೆ. ಇದರಿಂದ ಹ್ಯಾಕರ್‌ಗಳು ನಿಮ್ಮ ಫೋನ್‌ನಿಂದ ಸಂದೇಶಗಳನ್ನು ಕಳುಹಿಸಬಹುದು, ವೈಯಕ್ತಿಕ ಡೇಟಾವನ್ನು ಕದಿಯಬಹುದು ಮತ್ತು ಹಣವನ್ನು ಸುಲಿಗೆ ಮಾಡಬಹುದು. ಆದರೆ ಇದು ಯಾವುದು ಫೋನ್ ಮಾಲಕರಿಗೆ ಗೊತ್ತಾಗುವುದಿಲ್ಲ.

ಹೇಗೆ ನಡೆಯುತ್ತದೆ ಹಗರಣ?

ವಂಚಕರು ಸಾಮಾನ್ಯವಾಗಿ ಅಜ್ಞಾತ ಸಂಖ್ಯೆಯಿಂದ ವಾಟ್ಸಾಪ್ ಸಂದೇಶ ಕಳುಹಿಸುತ್ತಾರೆ. ಸಂದೇಶವು ಕಾನೂನುಬದ್ಧವಾಗಿರುವಂತೆ ಕಂಡುಬರುತ್ತದೆ. ಆದರೆ ಇದು ವಾಸ್ತವವಾಗಿ ಹಾನಿಕಾರಕ ಎಪಿಕೆ ಫೈಲ್ ಆಗಿರುತ್ತದೆ. ಈ ಸಂದೇಶ ಸ್ವೀಕರಿಸುವವರು ಫೈಲ್ ಅನ್ನು ಡೌನ್‌ಲೋಡ್ ಮಾಡಿದ ಅನಂತರ ಫೋನ್‌ನಲ್ಲಿ ಅಪ್ಲಿಕೇಶನ್ ವೊಂದನ್ನು ರಹಸ್ಯವಾಗಿ ಸ್ಥಾಪಿಸಲಾಗುತ್ತದೆ. ದುರುದ್ದೇಶಪೂರಿತ ಅಪ್ಲಿಕೇಶನ್ ಮೊಬೈಲ್ ನಲ್ಲಿರುವ ಸೂಕ್ಷ್ಮ ಡೇಟಾವನ್ನು ಪ್ರವೇಶಿಸಬಹುದು, ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಬಹುದು ಮತ್ತು ಫೋನ್‌ನಲ್ಲಿರುವ ವಿವಿಧ ಮಾಹಿತಿಗಳನ್ನು ಕದಿಯಬಹುದು.

ಫೋನ್‌ನ ಮಾಲೀಕರಂತೆ ಸೈಬರ್ ಅಪರಾಧಿಗಳು ವಿವಿಧ ಸಂಪರ್ಕ ಸಂಖ್ಯೆಗಳಿಗೆ ವಂಚನೆಯ ಸಂದೇಶಗಳನ್ನು ಕಳುಹಿಸಬಹುದು. ಹಣ ಅಥವಾ ಸೂಕ್ಷ್ಮ ಮಾಹಿತಿಯನ್ನು ಕಳುಹಿಸಲು ಮೊಬೈಲ್ ಅನ್ನು ಬಳಸಬಹುದು.

Cyber ​​Crime

ಸೈಬರ್ ಸೆಕ್ಯುರಿಟಿ ತಜ್ಞರ ಎಚ್ಚರಿಕೆ

ಹಿಮಾಚಲ ಪ್ರದೇಶದ ಸೈಬರ್ ಪೊಲೀಸರು ಈ ಎಚ್ಚರಿಕೆಯನ್ನು ನೀಡಿದ್ದು, ಅಪರಿಚಿತ ಸಂಖ್ಯೆಗಳಿಂದ ವಿಶೇಷವಾಗಿ ಲಗತ್ತಿಸಿರುವ ಆಮಂತ್ರಣ ಪತ್ರಿಕೆಗಳ ಬಗ್ಗೆ ಎಚ್ಚರಿಕೆಯಿಂದ ಇರಿ. ಅಪರಿಚಿತ ಮೂಲಗಳಿಂದ ಕಳುಹಿಸಲಾದ ಯಾವುದೇ ಫೈಲ್ ಅನ್ನು ಡೌನ್‌ಲೋಡ್ ಮಾಡಬಾರದು. ವಿಶೇಷವಾಗಿ ಎಪಿಕೆ ಫೈಲ್‌ಗಳು. ಇವುಗಳನ್ನು ಸಾಮಾನ್ಯವಾಗಿ ಹಾನಿಕಾರಕ ಅಪ್ಲಿಕೇಶನ್‌ಗಳನ್ನು ವಿತರಿಸಲು ಬಳಸಲಾಗುತ್ತದೆ.

ಅಪೇಕ್ಷಿಸದ ಯಾವುದೇ ಮದುವೆಯ ಆಮಂತ್ರಣ ಅಥವಾ ಫೈಲ್ ಅನ್ನು ಅಪರಿಚಿತ ಸಂಖ್ಯೆಯಿಂದ ಸ್ವೀಕರಿಸಿದರೆ ಅದರ ಮೇಲೆ ಕ್ಲಿಕ್ ಮಾಡಬೇಡಿ. ಫೋನ್‌ಗೆ ಬಂದ ಯಾವುದೇ ಫೈಲ್ ಅನ್ನು ಡೌನ್ ಲೋಡ್ ಮಾಡುವ ಮೊದಲು ಅದನ್ನು ಕಳುಹಿಸಿದವರಿಂದ ಖಚಿತಪಡಿಸಿಕೊಳ್ಳಿ ಎಂದು ಹಿಮಾಚಲ ಪ್ರದೇಶ ರಾಜ್ಯ ಸಿಐಡಿ ಮತ್ತು ಸೈಬರ್ ಕ್ರೈಂ ವಿಭಾಗದ ಡಿಐಜಿ ಮೋಹಿತ್ ಚಾವ್ಲಾ ತಿಳಿಸಿದ್ದಾರೆ.

Chennai Horror: ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ವೈದ್ಯರಿಗೆ ಏಳು ಬಾರಿ ಚಾಕು ಇರಿದ ಯುವಕ; ವಿಡಿಯೋ ಇದೆ

ವಂಚನೆಯಾದಾಗ ಏನು ಮಾಡಬೇಕು?

ಯಾವುದೇ ರೀತಿಯಲ್ಲಿ ಸೈಬರ್ ವಂಚನೆಗೆ ಒಳಗಾಗಿರುವುದು ತಿಳಿದ ತಕ್ಷಣ ರಾಷ್ಟ್ರೀಯ ಸಹಾಯವಾಣಿ 1930 ಅನ್ನು ಡಯಲ್ ಮಾಡಿ. ಈ ಮೂಲಕ ಅಥವಾ ದೂರನ್ನು ಅಧಿಕೃತ ಸರ್ಕಾರಿ ಪೋರ್ಟಲ್‌ https://cybercrime.gov.in ನಲ್ಲಿ ನೊಂದಾಯಿಸಿಕೊಳ್ಳಿ.