ನವದೆಹಲಿ: ಸಿಂಗಪುರದಲ್ಲಿ ಡಿ. 12ರಂದು ನಡೆದ ವಿಶ್ವ ಚೆಸ್ ಚಾಂಪಿಯನ್ಶಿಪ್ (WCC) ಪಂದ್ಯದಲ್ಲಿ ಭಾರತದ 18 ವರ್ಷದ ಡಿ. ಗುಕೇಶ್ (D Gukesh) ಚೀನಾದ ಲಿರಿನ್ ಅವರನ್ನು ಸೋಲಿಸಿದ್ದಾರೆ. ಆ ಮೂಲಕ ವಿಶ್ವದ ಅತ್ಯಂತ ಕಿರಿಯ ಚಾಂಪಿಯನ್ ಎಂದೆನಿಸಿಕೊಂಡಿದ್ದಾರೆ. ವಿಶ್ವನಾಥನ್ ಆನಂದ (Viswanathan Anand) ಬಳಿಕ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ ಎರಡನೇ ಭಾರತೀಯರಾಗಿದ್ದಾರೆ. ಸದ್ಯ ಎಲ್ಲೆಡೆ ಚರ್ಚೆಯಲ್ಲಿರುವ ಗುಕೇಶ್ ಯಾರು ಅವರ ಹಿನ್ನೆಲೆಯ ಕುರಿತಾದ ಮಾಹಿತಿ ಇಲ್ಲಿದೆ.
ಹಿನ್ನೆಲೆಯೇನು?
2006ರ ಮೇ 26ರಂದು ಚೆನೈನಲ್ಲಿ ಜನಿಸಿದ ದೊಮ್ಮರಾಜು ಗುಕೇಶ್ ಅವರದ್ದು ಮೂಲತಃ ತೆಲಗು ಕುಟುಂಬ. ಅವರ ತಂದೆ ಡಾ. ರಾಜನಿಕಾಂತ್ ಅವರು ಕಿವಿ ಮತ್ತು ಮೂಗಿನ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಯಿ ಡಾ. ಪದ್ಮಾ ಮೈಕ್ರೋಬಯೋಲಜಿಸ್ಟ್ ಆಗಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಹೆಚ್ಚು ಗ್ರಹಿಕಾ ಶಕ್ತಿಯನ್ನು ಹೊಂದಿದ್ದ ಗುಕೇಶ್ ತಮ್ಮ ಏಳನೇ ವಯಸ್ಸಿನಲ್ಲಿ ಚೆಸ್ ಕಲಿಯಲು ಪ್ರಾರಂಭಿಸಿದರು.
ಶಾಲೆಯಲ್ಲೇ ಮೊದಲು ಚೆಸ್ ಕಲಿತದ್ದು
ಗುಕೇಶ್ ತಮ್ಮ ಏಳನೇ ವಯಸ್ಸಿನಲ್ಲಿ ವೇಲಮ್ಮಾಳ್ ಶಾಲೆಯಲ್ಲಿ ಮೊದಲು ಚೆಸ್ ಬಗ್ಗೆ ತಿಳಿದುಕೊಂಡಿದ್ದರಂತೆ. ನಂತರ ಆಟದ ಬಗ್ಗೆ ಅತೀವ ಆಸಕ್ತಿ ಬೆಳೆಸಿಕೊಂಡ ಇವರು ತಮ್ಮ ಮೊದಲ ಚೆಸ್ ಗುರು ಭಾಸ್ಕರ್ ವಿ. ಅವರ ಮಾರ್ಗದರ್ಶನದಲ್ಲಿ ತರಬೇತಿ ಪ್ರಾರಂಭಿಸಿದ್ದರು. ಮೊದಲಿನಿಂದಲೇ ಆಟದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರಿಂದ ಚೆಸ್ನಲ್ಲಿ ಪಳಗಲು ಹೆಚ್ಚು ದಿನ ಬೇಕಿರಲಿಲ್ಲ. ತಮ್ಮ 12ನೇ ವಯಸ್ಸಿನಲ್ಲಿಯೇ ಗುಕೇಶ್ ಭಾರತದ ಅತ್ಯಂತ ಕಿರಿಯ ಗ್ರ್ಯಾಂಡ್ಮಾಸ್ಟರ್ ಆಗಿ ಹೊರ ಹೊಮ್ಮಿದ್ದರು. ನಂತರ ಏಷ್ಯನ್ ಯೂತ್ ಚೆಸ್ ಚಾಂಪಿಯನ್ಶಿಪ್ನಲ್ಲಿ, ಗುಕೇಶ್ ಐದು ಚಿನ್ನದ ಪದಕಗಳಿಗೆ ಕೊರಳೊಡ್ಡಿದರು.
ತಮ್ಮ 12ನೇ ವಯಸ್ಸಿನಲ್ಲಿ ಗುಕೇಶ್ 2017ರಲ್ಲಿ 34ನೇ ಕ್ಯಾಪೆಲ್ಲೆ-ಲಾ-ಗ್ರ್ಯಾಂಡೆ ಓಪನ್ನಲ್ಲಿ ಇಂಟರ್ನ್ಯಾಷನಲ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಕಳೆದ ಏಪ್ರಿಲ್ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್ಶಿಪ್ನ ಅರ್ಹತಾ ಸ್ಪರ್ಧೆಯಾದ ಅಭ್ಯರ್ಥಿಗಳ ಪಂದ್ಯಾವಳಿಯಲ್ಲಿ ಭಾಗವಹಿಸಿದ ಮೂರನೇ ಕಿರಿಯ ಆಟಗಾರನೆನಿಸಿಕೊಂಡಿದ್ದರು. ಇದರ ಜೊತೆಗೆ ಈ ಪಂದ್ಯಾವಳಿಯಲ್ಲಿ 9 ಅಂಕ ಗಳಿಸಿ ಪಂದ್ಯಾವಳಿಯನ್ನು ಗೆದ್ದುಕೊಂಡಿದಲ್ಲದೆ, ಕೇವಲ 17ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಎನಿಸಿಕೊಂಡಿದ್ದರು. ಇದೀಗ ವಿಶ್ವ ಚಾಂಪಿಯನ್ ಆಗುವ ಮೂಲಕ ಮನೆ ಮಾತಾಗಿದ್ದಾರೆ. ಅವರ ಈ ಸಾಧನೆಗೆ ಭಾರತದ ಚೆಸ್ ಲೆಜೆಂಡ್ ವಿಶ್ವನಾಥನ್ ಆನಂದ್ ಅಭಿನಂದನೆ ತಿಳಿಸಿದ್ದಾರೆ.
ಕುಟುಂಬದವರೇ ಬೆನ್ನೆಲುಬು
ಗುಕೇಶ್ ಅವರ ಈ ಸಾಧನೆಗೆ ಕುಟುಂವೇ ಕಾರಣವಂತೆ. ಈ ಹಿಂದೆ ಮಾಧ್ಯಮಗಳೊಂದಿಗೆ ನಡೆದ ಕೆಲ ಸಂದರ್ಶನಗಳಲ್ಲಿ ನನ್ನ ಸಾಧನೆಗೆ ನನ್ನ ಕುಟುಂಬದವರ ಬೆಂಬಲವೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಗುಕೇಶ್ ಚೆಸ್ ಆಡುತ್ತಿದ್ದಾಗ ತಂದೆ ಡಾ. ರಜನಿಕಾಂತ್ ಹೊರಗಡೆ ನಿಂತು ಪ್ರಾರ್ಥಿಸುತ್ತಿರುವ ವಿಡಿಯೊ ಎಲ್ಲೆಡೆ ವೈರಲ್ ಆಗಿತ್ತು. ಗೆಲುವಿನ ನಂತರ ಭಾವೋದ್ವೇಗಕ್ಕೆ ಒಳಗಾದ ಅವರು ಸಭಾಂಗಣದತ್ತ ಧಾವಿಸಿ ಗುಕೇಶ್ ಅವರೊಂದಿಗೆ ಅಪ್ಪುಗೆಯನ್ನು ಹಂಚಿಕೊಂಡು, ಐತಿಹಾಸಿಕ ಗೆಲುವನ್ನು ಒಟ್ಟಿಗೆ ಆಚರಿಸಿದರು. ಇತ್ತ ತಾಯಿ ಕೂಡ ಭಾವುಕರಾಗಿದ್ದು, ಮಗ ಗೆದ್ದ ಖುಷಿಯಲ್ಲಿ ಆನಂದ ಭಾಷ್ಪ ಸುರಿಸಿದ್ದರು.
ಈ ಸುದ್ದಿಯನ್ನೂ ಓದಿ : D Gukesh: ವಿಶ್ವ ಚೆಸ್ ಚಾಂಪಿಯನ್ಶಿಪ್ ಕಿರೀಟ ತೊಟ್ಟ 18 ವರ್ಷದ ಗುಕೇಶ್; ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಆಟಗಾರ