Saturday, 12th October 2024

ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳ ಜತೆ ಪ್ರತಿಮೆ ನಿರ್ಮಾಣ ಕೆಲಸ ವೀಕ್ಷಿಸಿದ ಡಿಸಿಎಂ

*ನೋಯಿಡಾದಲ್ಲಿ ಭರದಿಂದ ಸಿದ್ಧವಾಗುತ್ತಿದೆ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ; ವರ್ಷದಲ್ಲಿಯೇ ಲೋಕಾರ್ಪಣೆ

ನವದೆಹಲಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ನಿರ್ಮಾಣ ಕಾರ್ಯದ ಪ್ರಗತಿಯನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಶನಿವಾರ ಪರಿಶೀಲಿಸಿದರು.

ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿರುವ ಖ್ಯಾತ ಕಲಾವಿದ ರಾಮಸುತಾರ ಅವರ ಉತ್ತರ ಪ್ರದೇಶದ ನೋಯಿಡಾದಲ್ಲಿರುವ ಸ್ಟುಡಿಯೋಕ್ಕೆ ಸ್ವಾಮೀಜಿ ಅವರ ಜತೆ ಭೇಟಿ ನೀಡಿದ ಡಿಸಿಎಂ, ವಿವಿಧ ಹಂತಗಳಲ್ಲಿ ನಿರ್ಮಾಣವಾಗುತ್ತಿರುವ ನಾಡಪ್ರಭುಗಳ ಪ್ರತಿಮೆಯನ್ನು ವೀಕ್ಷಿಸಿದರು. ಜತೆಗೆ; ಈ ಮಹತ್ಕಾ ರ್ಯದ ಪ್ರಗತಿಯನ್ನು ಹಾಗೂ ಪ್ರತಿಮೆ ಮೂಡಿಬರುತ್ತಿರುವ ವಿವಿಧ ಹಂತಗಳ ಮಾಹಿತಿಯನ್ನು ಸುತಾರ ಅವರು ಸ್ವಾಮೀಜಿಗಳು ಮತ್ತು ಡಿಸಿಎಂ ಅವರಿಗೆ ವಿವರಿಸಿದರು.

ಒಟ್ಟು ಮೂರು ಹಂತಗಳಲ್ಲಿ ಪ್ರತಿಮೆ ನಿರ್ಮಾಣವಾಗಲಿದ್ದು, ಮೊದಲು ಥರ್ಮೋಕೋಲ್‌ನಲ್ಲಿ ಸಿದ್ಧವಾಗಲಿದೆ. ಈಗಾಗಲೇ ಎದೆಯ ಮಟ್ಟದವರೆಗೂ ಈ ಹಂತದ (ಥರ್ಮೋಕೋಲ್‌) ಪ್ರತಿಮೆ ಸಿದ್ಧವಾಗಿದೆ. ಶಿರಭಾಗದ ಕೆಲಸವೂ ರಾಮಸುತಾರ ಅವರ ಇನ್ನೊಂದು ಸ್ಟುಡಿಯೋದಲ್ಲಿ ಭರದಿಂದ ಸಾಗಿದೆ. ಸಂಜೆ ಅಲ್ಲಿಗೆ ಭೇಟಿ ನೀಡಿ ನಾಡಪ್ರಭುಗಳ ಮುಖಚಹರೆ ಮೂಡಿಬರುತ್ತಿರುವ ರೀತಿಯನ್ನು ವೀಕ್ಷಿಸಿಸದರು.

ವರ್ಷದೊಳಗೆ ಪ್ರತಿಮೆ ಪ್ರತಿಷ್ಠಾಪನೆ: ನೋಯಿಡಾದಲ್ಲಿ ಪ್ರತಿಮೆಯ ನಿರ್ಮಾಣ ಕೆಲಸವನ್ನು ವೀಕ್ಷಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ; ಕೋವಿಡ್‌ ಮತ್ತು ಲಾಕ್‌ಡೌನ್‌  ಕಾರಣಕ್ಕೆ ಪ್ರತಿಮೆ ನಿರ್ಮಾಣ ಕೆಲಸವು ಸ್ವಲ್ಪ ತಡವಾಗಿದೆ. ಇಲ್ಲವಾಗ ದ್ದಿದ್ದರೆ, ಪೂರ್ವ ನಿಗಧಿಯಂತೆ ನಾಡಪ್ರಭುಗಳ ಮುಂದಿನ ಜಯಂತಿಯಂದು ಪ್ರತಿಷ್ಠಾಪನೆ ಕಾರ್ಯ ನೆರೆವೇರುತ್ತಿತ್ತು. ಆದರೆ, ಇನ್ನೊಂದು ವರ್ಷದಲ್ಲಿ ನಾಡಪ್ರಭುಗಳ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಗುವುದು. ಅತ್ಯಂತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಪ್ರತಿಮೆ ಮೂಡಿಬರುತ್ತಿದೆ. ಪೂಜ್ಯ ಸ್ವಾಮೀಜಿ ಅವರು ಎಲ್ಲವನ್ನೂ ವೀಕ್ಷಿಸಿ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದರು.

ಕೆಲಸ ವೇಗವಾಗಿ ಸಾಗಿದೆ: ಇದೇ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು; ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಿಕೊಂಡು ಉತ್ಕೃಷ್ಟ ಗುಣಮಟ್ಟದಲ್ಲಿ ನಾಡಪ್ರಭುಗಳ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ವಿವಿಧ ಹಂತಗಳಲ್ಲಿ ನಡೆಯುತ್ತಿರುವ ಕೆಲಸಗಳನ್ನು ನಾವು ವೀಕ್ಷಣೆ ಮಾಡಿದೆವು. ಇವೆಲ್ಲವೂ ಮುಗಿಯಲಿಕ್ಕೆ ಇನ್ನು ಮೂರು-ನಾಲ್ಕು ಹಂತಗಳಿವೆ. ಇಡೀ ಕೆಲಸ ಮುಗಿಯಲು 9ರಿಂದ10 ತಿಂಗಳು ಬೇಕಾಗುತ್ತದೆ ಎಂದು ಸುತಾರ ಅವರೇ ಹೇಳಿದ್ದಾರೆ ಎಂದರು.

ರಾಮಸುತಾರ ಅವರು ಕೂಡ ಸುದ್ದಿಗಾರರ ಜತೆ ಮಾಹಿತಿ ಹಂಚಿಕೊಂಡರು. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಹಾಗೂ ಡಿಸಿಎಂ ಅವರ ಕಾರ್ಯದರ್ಶಿ ಪ್ರದೀಪ್‌, ಕೆಂಪೇಗೌಡ ಪಾರಂಪರಿಕಾ ತಾಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ವಿನಯ್ ಅವರೂ ಈ ಸಂದರ್ಭದಲ್ಲಿ ಹಾಜರಿದ್ದರು.

ಕಳೆದ ವರ್ಷ ಜೂನ್‌ 27ರಂದು ಕೆಂಪೇಗೌಡರ ಜನ್ಮದಿನದಂದು ಪ್ರತಿಮೆ ಸ್ಥಾಪನೆ ಹಾಗೂ ಕೆಂಪೇಗೌಡ ಹೆರಿಟೇಜ್‌ ಪಾರ್ಕ್‌ ನಿರ್ಮಾಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭೂಮಿಪೂಜೆ ನೆರೆವೇರಿಸಿದ್ದರು. ವಿರಾಜಮಾನವಾನ ನಾಡಪ್ರಭುಗಳ ಪ್ರತಿಮೆಯು 23 ಎಕರೆಗಳ ವಿಶಾಲ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ.