Wednesday, 11th December 2024

Death Sentence: ಯುಎಇನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು ರಕ್ಷಿಸುವಂತೆ ಪ್ರಧಾನಿಗೆ ಕುಟುಂಬದವರ ಮನವಿ

Death Sentence

ಬಂದಾ: ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ (UAE) ಉತ್ತರ ಪ್ರದೇಶದ (Uttarpradesh) ಬಂದಾ ಜಿಲ್ಲೆಯ ಶಹಜಾದಿ (Shahzadi case)  ಎಂಬ ಮಹಿಳೆಯನ್ನು ಸೆಪ್ಟೆಂಬರ್ 21 ರಂದು ಯುಎಇನಲ್ಲಿ ಗಲ್ಲಿಗೇರಿಸಲು (Death Sentence) ನಿರ್ಧರಿಸಲಾಗಿದೆ. ಅವರನ್ನು ರಕ್ಷಿಸುವಂತೆ ಅವರ ಕುಟುಂಬವು ಈಗ ಪ್ರಧಾನಿ ನರೇಂದ್ರ ಮೋದಿ (PM Narendra modi) ಅವರ ಮೊರೆ ಹೋಗಿದೆ. ಬಂದಾ ಜಿಲ್ಲೆಯ ಹಳ್ಳಿಯಲ್ಲಿ ಒಂದು ರೋಟಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಆಕೆಗೆ ಸಾಮಾಜಿಕ ಜಾಲತಾಣದ ಮೂಲಕ ಮಾನವ ಕಳ್ಳಸಾಗಣೆದಾರ ಉಝೈರ್ ಎಂಬಾತನ ಪರಿಚಯವಾಗಿದೆ. ಆತ ಆಕೆಯನ್ನು ಪ್ರೀತಿಸುವುದಾಗಿ ನಂಬಿಸಿ ಕರೆದುಕೊಂಡು ಹೋಗಿದ್ದ. ಅವಳ ಸುಟ್ಟ ಮುಖಕ್ಕೆ ಚಿಕಿತ್ಸೆ ಕೊಡಿಸುವುದಾಗಿ ನಂಬಿಸಿ ಆಗ್ರಾಕ್ಕೆ ಕರೆದ ಆತ ಅಲ್ಲಿ ಆಕೆಯನ್ನು ಫೈಜ್ ಮತ್ತು ನಾದಿಯಾ ದಂಪತಿಗೆ ಮಾರಾಟ ಮಾಡಿದ್ದ. ಅವರು ಆಕೆಯನ್ನು ಕರೆದುಕೊಂಡು ದುಬೈಗೆ ಹೋಗಿದ್ದರು.

ತನ್ನನ್ನು ಮಾರಾಟ ಮಾಡುವ ಮೊದಲು ಉಝೈರ್ ಆಕೆಯಿಂದ ಆಭರಣ, ಅಂಗವಿಕಲರ ಕಾರ್ಡ್, ಎಟಿಎಂ ಮತ್ತು ಬ್ಯಾಂಕ್ ನಲ್ಲಿದ್ದ ಹಣ ಎಲ್ಲವನ್ನೂ ಕಿತ್ತುಕೊಂಡಿದ್ದಾನೆ ಎಂದು ಶಹಜಾದಿ ಆರೋಪಿಸಿದ್ದಳು.

ಶಹಜಾದಿ ದುಬೈನಲ್ಲಿ ತೀವ್ರ ಕಿರುಕುಳಕ್ಕೆ ಒಳಗಾಗಿದ್ದಳು. ಆಕೆಯನ್ನು ಕರೆದುಕೊಂಡು ಹೋಗಿದ್ದ ದಂಪತಿಯ ಮನೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡಿಸುತ್ತಿದ್ದರು. ಅದೇ ರೀತಿ ಅವರ ನಾಲ್ಕು ವರ್ಷದ ಮಗು ಅನಾರೋಗ್ಯದಿಂದ ಸಾವನ್ನಪ್ಪಿದ ಬಳಿಕ ಆಕೆಯನ್ನು ಬಂಧಿಸಲಾಗಿತ್ತು. ವಿಚಾರಣೆಯ ಅನಂತರ ನ್ಯಾಯಾಲಯವು ಮಗುವಿನ ಸಾವಿಗೆ ಆಕೆ ಕಾರಣ ಎಂದು ಹೇಳಿ ಮರಣದಂಡನೆ ವಿಧಿಸಿದೆ. ಸೆಪ್ಟೆಂಬರ್ 21 ರಂದು ಮರಣದಂಡನೆ ನಿಗದಿಪಡಿಸಲಾಗಿದೆ.  ಆಕೆ ಈಗ ತನ್ನ ತಂದೆಯೊಂದಿಗೆ ಮಾತನಾಡಿ ವಿಷಯವನ್ನು ಹೇಳಿ ಸಹಾಯಕ್ಕಾಗಿ ಕೋರಿದ್ದಾಳೆ.

Kim Jong Un: ಪ್ರವಾಹ ನಿರ್ವಹಣೆಯಲ್ಲಿ ವಿಫಲ; 30 ಸರ್ಕಾರಿ ಅಧಿಕಾರಿಗಳಿಗೆ ಗಲ್ಲು

ಶಹಜಾದಿ ಕುಟುಂಬದ ಕೋರಿಕೆಯ ಮೇರೆಗೆ ಬಂದಾ ಸಿಜೆಎಂ ಭಗವಾನ್ ದಾಸ್ ಗುಪ್ತಾ ಅವರು ಆರೋಪಿ ಫೈಜ್ ಮತ್ತು ನಾದಿಯಾ ದಂಪತಿ ಮತ್ತು ಉಝೈರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಾನವ ಕಳ್ಳಸಾಗಣೆ ಆರೋಪದ ಮೇರೆಗೆ ಮೂವರ ಬಂಧನಕ್ಕೆ ಆದೇಶ ನೀಡಲಾಗಿದ್ದು, ಪೊಲೀಸರು ಆರೋಪಿಗಳ ಹುಡುಕಾಟದಲ್ಲಿದ್ದಾರೆ. ಶಹಜಾದಿಗೆ ಯುಎಇನಲ್ಲಿ ಮರಣದಂಡನೆ ವಿಧಿಸಿರುವುದರಿಂದ ಆಕೆಯ ರಕ್ಷಣೆಗಾಗಿ ಈಗ ಆಕೆಯ ಕುಟುಂಬ ಪ್ರಧಾನ ಮಂತ್ರಿ ಕಚೇರಿಯನ್ನು ಸಂಪರ್ಕಿಸಿದ್ದಾರೆ.