Friday, 13th December 2024

ಶವದೊಂದಿಗೆ 600 ಕಿ.ಮೀ. ದೂರ ರೈಲಿನಲ್ಲಿ ಸಂಚರಿಸಿದ ಪ್ರಯಾಣಿಕರು…!

ತ್ತರಪ್ರದೇಶ: ರೈಲಿನ ಜನರಲ್ ಕೋಚ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು ಉಳಿದ ಪ್ರಯಾಣಿಕರು ಅನಿವಾರ್ಯವಾಗಿ ಶವದೊಂದಿಗೆ ಸುಮಾರು 600 ಕಿ.ಮೀ. ದೂರ ಸಂಚರಿಸಿದ ಘಟನೆ ನಡೆದಿದೆ.

ಚೆನ್ನೈನಿಂದ ಹಜರತ್ ನಿಜಾಮುದ್ದೀನ್‌ಗೆ ತೆರಳುತ್ತಿದ್ದ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲ್ ನ ಜನರಲ್​ ಕೋಚ್​ನಲ್ಲಿ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ರಾಮ್‌ಜೀತ್ ಯಾದವ್ (36 ) ಅನಾರೋಗ್ಯದಿಂದ ಬಳಲುತ್ತಿದ್ದು ಸೋದರ ಮಾವ ಗೋವರ್ಧನ ಅವರೊಂದಿಗೆ ಉತ್ತರಪ್ರದೇಶಕ್ಕೆ ತೆರಳುತ್ತಿದ್ದರು. ರೈಲು ನಾಗ್ಪುರ ತಲುಪಿದಾಗ ರಾಮ್‌ಜೀತ್ ಅವರ ಆರೋಗ್ಯದಲ್ಲಿ ಏರುಪೇರಾಗಿ ಅವರು ರೈಲಿನಲ್ಲೇ ಸಾವನ್ನಪ್ಪಿದ್ದಾರೆ.

ಕೂಡಲೇ ಗೋವರ್ಧನ್ ಮತ್ತು ಇತರ ರೈಲು ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ರೈಲು ಭೋಪಾಲ್ ತಲುಪಿದಾಗ ಮತ್ತೆ ರೈಲು ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.

ರೈಲು ಝಾನ್ಸಿ ತಲುಪಿದ ಮೇಲೆ ಸರ್ಕಾರಿ ರೈಲ್ವೆ ಪೊಲೀಸರು ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.