Saturday, 23rd November 2024

Delhi Horror: ಮರು ಮದುವೆಗೆ ಅಡ್ಡಿ ಎಂದು ಐದು ವರ್ಷದ ಕಂದಮ್ಮನನ್ನೇ ಕತ್ತು ಹಿಸುಕಿ ಕೊಂದ ಪಾಪಿ ತಾಯಿ

Murder case

ನವದೆಹಲಿ: ಮಹಿಳೆಯೊಬ್ಬಳು ಹೆತ್ತ ಮಗುವನ್ನೇ ಕತ್ತು ಹಿಸುಕಿ ಸಾಯಿಸಿರುವ ದಾರುಣ ಘಟನೆ ವರದಿಯಾಗಿದೆ. ವಾಯುವ್ಯ ದೆಹಲಿಯ ಅಶೋಕ್‌ ವಿಹಾರ್‌ನಲ್ಲಿ ಈ ಘಟನೆ ನಡೆದಿದ್ದು, ಇನ್ಸ್ಟಾಗ್ರಾಂನಲ್ಲಿ ಸ್ನೇಹ ಬೆಳೆಸಿದ ವ್ಯಕ್ತಿಯೊಂದಿಗೆ ಮದುವೆಯಾಗಲು ಸಾಧ್ಯವಾಗದ ಕಾರಣ ಹತಾಶೆಗೊಂಡು, ಐದು ವರ್ಷದ ಸ್ವಂತ ಮಗಳನ್ನು ಕತ್ತು ಹಿಸುಕಿ ಕೊಂದಿದ್ದಾಳೆ(Delhi Horror).

ಏನಿದು ಪ್ರಕರಣ?

ವಾಯುವ್ಯ ದೆಹಲಿಯ ಅಶೋಕ್‌ ವಿಹಾರ್‌ನಲ್ಲಿ ವಾಸವಿರುವ ಮಹಿಳೆಯೊಬ್ಬಳು ಇನ್ಸ್ಟಾಗ್ರಾಂನಲ್ಲಿ ರಾಹುಲ್‌ ಎಂಬ ವ್ಯಕ್ತಿಯ ಜೊತೆ ಸಂಪರ್ಕ ಬೆಳೆಸಿದ್ದಳು. ರಾಹುಲ್‌ ಮದುವೆಯಾಗುವ ಸಲುವಾಗಿ ಮಹಿಳೆ ಹಿಮಾಚಲಪ್ರದೇಶದಿಂದ ದೆಹಲಿಯತ್ತ ಬಂದಿದ್ದು, ಆತ ಮತ್ತು ಆತನ ಕುಟುಂಬದವರು ಮಗುವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಆಕೆಯನ್ನು ಮದುವೆಯಾಗಲು ಕೂಡ ಒಪ್ಪಿಕೊಂಡಿರುವುದಿಲ್ಲ. ಈ ನಿರಾಕರಣೆಯಿಂದ ತೀರಾ ಹತಾಶಳಾದ ತಾಯಿ ತನ್ನ ಮಗುವಿನ ಕತ್ತು ಹಿಸುಕಿದ್ದಾಳೆ ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನು ಮಗು ಸತ್ತಿದೆ ಎಂದು ತಿಳಿಯುತ್ತಿದ್ದಂತೆ ಚಾಲಕಿ ತಾಯಿ ನೇರವಾಗಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಅಲ್ಲಿ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ನಿಜಾಂಶ ಒಪ್ಪಿಕೊಂಡಿದ್ದಾಳೆ. ಇನ್ನು ಇದೇ ವೇಳೆ ದೆಹಲಿಗೆ ತೆರಳುವ ಮುನ್ನ, ಹಿಮಾಚಲ ಪ್ರದೇಶದಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿ ಮಗುವಿನೊಂದಿಗೆ ವಾಸಿಸುತ್ತಿದ್ದೆ ಎಂದು ಮಹಿಳೆ ಹೇಳಿಕೊಂಡಿದ್ದು, ಅಲ್ಲಿ, ಮಗುವಿನ ಮೇಲೆ ಸಂಬಂಧಿಯೊಬ್ಬರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂದಿದ್ದಾಳೆ.

ಭಾರತೀಯ ನ್ಯಾಯ ಸಂಹಿತಾ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 103 (ಕೊಲೆಗೆ ಶಿಕ್ಷೆ), 65 (2) (ಕೆಲವು ಪ್ರಕರಣಗಳಲ್ಲಿ ಅತ್ಯಾಚಾರಕ್ಕೆ ಶಿಕ್ಷೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ( ಪೋಕ್ಸೊ ) ಕಾಯಿದೆ ಸೆಕ್ಷನ್ 6 ಮತ್ತು ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಅಶೋಕ್‌ ವಿಹಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

ಆಗಸ್ಟ್‌ ತಿಂಗಳಲ್ಲಿ ಬಿಹಾರದ ಮುಜಾಫರ್‌ಪುರದಲ್ಲಿ ಇದೇ ರೀತಿಯ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ತನ್ನ ಪ್ರಿಯಕರನನ್ನು ಮದುವೆಯಾಗಲು ಮೂರು ವರ್ಷದ ಮಗಳನ್ನು ಕೊಲೆ ಮಾಡಿದ ಆರೋಪದ ಮೇಲೆ 26 ವರ್ಷದ ಮಹಿಳೆಯನ್ನು ಬಂಧಿಸಲಾಗಿತ್ತು. ಆಕೆ ತನ್ನ ಪತಿಯಾದ ಮನೋಜ್ ಕುಮಾರ್ ಜೊತೆಗೆ ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಳು.

ಕಾಜಲ್ ಎಂಬ ಹೆಸರಿನ ಮಹಿಳೆಯು ತನ್ನ ಪತಿಯನ್ನು ತೊರೆದು ತನ್ನ ಪ್ರೇಮಿಯನ್ನು ಮದುವೆಯಾಗಲು ಬಯಸಿದ್ದಳು. ವಿವಾಹಕ್ಕೆ ಮಗಳು ಅಡ್ಡಿಯಾಗಿದ್ದಾಳೆಂದು ಭಾವಿಸಿದ್ದಳು. ಆಕೆ ಕ್ರೈಮ್ ಸಂಬಂಧಿ ಧಾರಾವಾಹಿಗಳನ್ನು ನಿರಂತರವಾಗಿ ನೊಡುತ್ತಾ ಅದರಿಂದ ಪ್ರೇರಿತಳಾಗಿದ್ದು, ತನ್ನ ಮಗಳ ಕತ್ತು ಸೀಳಿ, ಆಕೆಯ ದೇಹವನ್ನು ಟ್ರಾಲಿ ಬ್ಯಾಗ್‌ನಲ್ಲಿ ಇರಿಸಿ ತನ್ನ ಮನೆಯ ಸಮೀಪವಿರುವ ಹೊಲದಲ್ಲಿ ಎಸೆದು ಹೋಗಿದ್ದ ವಿಷಯವು ವರದಿಯಾಗಿತ್ತು. ಸೀತಾಮರ್ಹಿ ಜಿಲ್ಲೆಯ ಆಕೆಯ ಪ್ರಿಯಕರನನ್ನೂ ಪೊಲೀಸರು ಅವನ ಮನೆಯಲ್ಲಿ ಬಂಧಿಸಿದ್ದರು. ಅವನನ್ನು ವಿಚಾರಣೆಗೊಳಪಡಿಸಲಾಯಿತು. ಮಗುವಿನ ಕೊಲೆಯಲ್ಲಿ ಅವನು ಭಾಗಿಯಾಗಿಲ್ಲ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: Viral News: ಹಸೆಮನೆ ಏರಬೇಕಾದವ ಸೇರಿದ್ದು ಮಸನಕ್ಕೆ; ಸಾವಿಗೂ ಮುನ್ನ ಮದುವೆ ಸಂಭ್ರಮದಲ್ಲಿದ್ದ ವರನ ವಿಡಿಯೊ ಫುಲ್‌ ವೈರಲ್‌!