Wednesday, 11th December 2024

ಐಷಾರಾಮಿ ಕಾರು ಕದಿಯುತ್ತಿದ್ದವನ ಬಂಧನ

ನವದೆಹಲಿ: ಕಳೆದ 2013ರಿಂದ ಐಷಾರಾಮಿ ಕಾರುಗಳನ್ನು ಕದಿಯುತ್ತಿದ್ದ ‘ಕಾರ್‌ ಕಿಂಗ್‌’ ಖ್ಯಾತಿಯ ಆರೋಪಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಸಿವಿಲ್‌ ಲೈನ್ಸ್‌ ಪ್ರದೇಶದ ನಿವಾಸಿ 42 ವರ್ಷದ ಕುನಾಲ್ ಎಂದು ಗುರುತಿಸ ಲಾಗಿದೆ.

‘ಕುನಾಲ್‌ನಿಂದ ಮೂರು ಕಾರು, ಹಲವು ಬಗೆಯ ನಂಬರ್ ಪ್ಲೇಟ್‌, ಕೀಗಳು ಸೇರಿದಂತೆ ಕಾರಿನ ಬಿಡಿಭಾಗಗಳನ್ನು ವಶಪಡಿಸಿಕೊಂಡಿದ್ದೇವೆ’ ಎಂದು ಉತ್ತರ ವಿಭಾಗದ ಡಿಸಿಪಿ ಸಾಗರ್ ಸಿಂಗ್ ಹೇಳಿದ್ದಾರೆ. ಕುನಾಲ್‌ ವಿರುದ್ಧ ದೆಹಲಿಯ ಅನೇಕ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

ಜ.10 ರಂದು ಶ್ರೆತಾಂಕ್ ಅಗರವಾಲ್ ಎಂಬವರು ತಮ್ಮ ಮನೆ ಬಳಿ ನಿಲ್ಲಿಸಿದ್ದ ಟೊಯೊಟಾ ಫಾರ್ಚುನರ್‌ ಕಾರು ಕಾಣೆಯಾಗಿದೆ ಎಂದು ದೂರು ನೀಡಿದ್ದರು. ಪ್ರಕರಣ ಸಂಬಂಧ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಕುನಾಲ್‌ನನ್ನು ಕಾಶ್ಮೀರದಲ್ಲಿ ಸೆರೆ ಹಿಡಿದಿದ್ದಾರೆ.

ಕುನಾಲ್‌ ಕದ್ದ ಕಾರುಗಳಿಗೆ ನಂಬರ್‌ ಪ್ಲೇಟ್‌ ಮತ್ತು ಚಾಸಿಸ್‌ ಸಂಖ್ಯೆಯನ್ನು ಬದಲಾಯಿಸುತ್ತಿದ್ದ. ಹಾಗಾಗಿ ತನಿಖೆ ನಡೆಸಲು ತೊಂದರೆಯಾಗುತ್ತಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

2013ರಿಂದ ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದು, ಕದ್ದ ಕಾರುಗಳನ್ನು ಉತ್ತರ ಪ್ರದೇಶ ಮತ್ತು ಕಾಶ್ಮೀರದಲ್ಲಿ ಮಾರಾಟ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.