ನವದೆಹಲಿ: ಭಾರತೀಯ ನೌಕಾಪಡೆ (Indian Navy) ಮತ್ತು ಶ್ರೀಲಂಕಾ ನೌಕಾಪಡೆ (Sri Lankan Navy) ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ (Arabian Sea) ಮೀನುಗಾರಿಕಾ ದೋಣಿಗಳಿಂದ (fishing boats) 500 ಕಿಲೋ ಗ್ರಾಂಗಳಷ್ಟು ಡ್ರಗ್ಸ್ (Drug Seize) ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಶ್ರೀಲಂಕಾ ನೌಕಾಪಡೆಯ ಅಧಿಕಾರಿಗಳು ಹಂಚಿಕೊಂಡ ಗುಪ್ತಚರ ಮಾಹಿತಿಯ ಆಧಾರದಲ್ಲಿ ಭಾರತೀಯ ನೌಕಾಪಡೆಯು ಅರಬ್ಬೀ ಸಮುದ್ರದಲ್ಲಿ ವ್ಯಾಪಕ ಶೋಧ ಮತ್ತು ಕಣ್ಗಾವಲು ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಭಾರತೀಯ ನೌಕಾಪಡೆಗೆ ಲಾಂಗ್ ರೇಂಜ್ ಮ್ಯಾರಿಟೈಮ್ ಪೆಟ್ರೋಲ್ ಏರ್ಕ್ರಾಫ್ಟ್, ರಿಮೋಟ್ಲಿ ಪೈಲಟೆಡ್ ಏರ್ಕ್ರಾಫ್ಟ್ ಮತ್ತು ನೌಕಾ ಹಡಗಿಗೆ ಗುರುಗ್ರಾಮ್ನಲ್ಲಿರುವ ಮಾಹಿತಿ ಫ್ಯೂಷನ್ ಸೆಂಟರ್ (ಇಂಡಿಯನ್ ಓಷನ್ ರೀಜನ್) ಮಾರ್ಗದರ್ಶನ ನೀಡಿತು.
ಶ್ರೀಲಂಕಾ ನೌಕಾಪಡೆಯ ನಿರಂತರ ಮಾಹಿತಿಯನ್ನು ಒದಗಿಸಿತ್ತು. ಭಾರತೀಯ ನೌಕಾಪಡೆಯ ವಿಮಾನಗಳ ವೈಮಾನಿಕ ಕಣ್ಗಾವಲು ಎರಡು ಅನುಮಾನಾಸ್ಪದ ದೋಣಿಗಳನ್ನು ಗುರುತಿಸಿತ್ತು. ನವೆಂಬರ್ 24 ಮತ್ತು 25 ರಂದು ಭಾರತೀಯ ನೌಕಾ ಹಡಗಿನ ಬೋರ್ಡಿಂಗ್ ತಂಡವು ಎರಡೂ ದೋಣಿಗಳನ್ನು ತಡೆದಿದ್ದು, ಇದರಿಂದ ಸುಮಾರು 500 ಕಿಲೋ ಗ್ರಾಂಗಳಷ್ಟು ಸ್ಫಟಿಕ ಮೆತ್ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದೆ.
ಈ ಕಾರ್ಯಾಚರಣೆಯನ್ನು ಇನ್ನಷ್ಟು ಮುಂದುವರಿಸಲು ಹೆಚ್ಚುವರಿ ಭಾರತೀಯ ನೌಕಾಪಡೆಯ ಹಡಗನ್ನು ಸಹ ನಿಯೋಜಿಸಲಾಗಿದೆ. ಎರಡು ದೋಣಿಗಳೊಂದಿಗೆ ಅದರಲ್ಲಿದ್ದ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಮಾದಕವಸ್ತುಗಳನ್ನು ಮುಂದಿನ ಕಾನೂನು ಪ್ರಕ್ರಿಯೆಗಳಿಗಾಗಿ ಶ್ರೀಲಂಕಾದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Hit and Run Case: ಮನೆಯ ಹೊರಗೆ ಆಟವಾಡುತ್ತಿದ್ದ 3 ವರ್ಷದ ಕಂದನ ಜೀವ ತೆಗೆದ ಟ್ರಕ್; ವಿಡಿಯೊ ಇದೆ
ಈ ತಿಂಗಳ ಆರಂಭದಲ್ಲಿ ಗುಜರಾತ್ ನ ಪೋರಬಂದರ್ ಕರಾವಳಿಯಲ್ಲಿ ಭಾರತೀಯ ನೌಕಾಪಡೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಮತ್ತು ಗುಜರಾತ್ ಪೊಲೀಸ್ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಇರಾನ್ ದೋಣಿಯಿಂದ ಸುಮಾರು 700 ಕೆ.ಜಿ. ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ.