ನವದೆಹಲಿ: ಮಹಾರಾಷ್ಟ್ರ(Maharashtra) ಚುನಾವಣೆಯ ಸಂದರ್ಭದಲ್ಲಿ ಪಡೆದ ಮತಗಳು ಮತ್ತು ಎಣಿಕೆಯಾದ ಮತಗಳ ನಡುವೆ ಭಾರೀ ಅಂತರವಿದೆ ಎಂದು ಕಾಂಗ್ರೆಸ್ (Congress) ಗಂಭೀರ ಆರೋಪ ಹೊರಿಸಿದೆ. ಆಡಳಿತಾರೂಢ ಬಿಜೆಪಿಯು ಮತ ಎಣಿಕೆಯಲ್ಲಿ ಅಕ್ರಮವೆಸಗಿದ್ದು, ಮತದಾರರ ಪಟ್ಟಿಯಿಂದ ಅನೇಕ ಮತದಾರರ ಹೆಸರನ್ನು ಅಳಿಸಲಾಗಿದೆ ಎಂದು ದೂಷಿಸಿದೆ. ಈ ಕುರಿತು ಖುದ್ದಾಗಿ ಚರ್ಚಿಸಲು ಡಿ. 3ರಂದು ಕಾಂಗ್ರೆಸ್ ನಿಯೋಗವನ್ನು ಚುನಾವಣಾ ಆಯೋಗವು ತನ್ನ ಕಚೇರಿಗೆ ಆಹ್ವಾನಿಸಿದೆ (Election Commission).
ʼʼಮಹಾರಾಷ್ಟ್ರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಪರಿಷ್ಕರಣೆ ಆಗಿರುವುದು ಅನುಮಾನ ಮೂಡಿಸಿದೆ. ಹಲವು ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದಿದ್ದರೆ, ಸಾಕಷ್ಟು ಸಂಖ್ಯೆಯಲ್ಲಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆʼʼ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಕಾಂಗ್ರೆಸ್, ʼʼಮತದಾರರ ಪಟ್ಟಿಯಲ್ಲಿ ಸರಾಸರಿ 50,000ದಷ್ಟು ಮತದಾರರ ಸಂಖ್ಯೆ ಸೇರ್ಪಡೆಯಾಗಿದ್ದ 50 ಕ್ಷೇತ್ರಗಳ ಪೈಕಿ 47ರಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಜಯಗಳಿಸಿವೆ ಎಂದು ಹೇಳಿದೆ.
ಇದೀಗ ಚುನಾವಣಾ ಅಂಕಿ ಅಂಶಗಳು ಮತ್ತು ಕರಡು ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸಗಳನ್ನು ಉಲ್ಲೇಖಿಸಿ ಭಾರತೀಯ ಚುನಾವಣಾ ಆಯೋಗವು ಕಾಂಗ್ರೆಸ್ ದೂರುಗಳನ್ನು ವಜಾಗೊಳಿಸಿದೆ.
ಮಹಾರಾಷ್ಟ್ರ ಚುನಾವಣೆಯ ಮತದಾರರ ಸೇರ್ಪಡೆ ಮತ್ತು ಅಳಿಸುವಿಕೆ ಕುರಿತ ಕಾಂಗ್ರೆಸ್‌ನ ಮೊದಲ ಆರೋಪಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಉತ್ತರಿಸಿದ್ದು, “ಮತದಾರರ ಪಟ್ಟಿಯನ್ನು ಪ್ರತಿ ಬಾರಿಯೂ ನಿಮ್ಮ ಪಕ್ಷ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ನಿಕಟ ಒಳಗೊಳ್ಳುವಿಕೆಯೊಂದಿಗೆ ಮತ್ತು ಅಂತಿಮಗೊಳಿಸಲಾಗುತ್ತದೆ. ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯ ಪ್ರತಿಗಳನ್ನೂ ಎಲ್ಲ ರಾಜಕೀಯ ಪಕ್ಷಗಳಿಗೆ ನೀಡಲಾಗುತ್ತದೆ. ಪರಿಶೀಲನೆ ಪ್ರಕ್ರಿಯೆಯ ಪ್ರತಿಯೊಂದು ಹಂತವೂ ರಾಜಕೀಯ ಪಕ್ಷಗಳನ್ನು ಒಳಗೊಂಡಿರುತ್ತದೆ” ಎಂದು ತಿಳಿಸಿದೆ.
ಮತದಾನದ ಶೇಕಡಾವಾರು ಅಂತರದ ಬಗ್ಗೆಯೂ ಕಾಂಗ್ರೆಸ್ ಗಂಭೀರವಾಗಿ ಆರೋಪ ಮಾಡಿದ್ದು, ಇದಕ್ಕೆ ಚುನಾವಣಾ ಆಯೋಗವು ಕಾಂಗ್ರೆಸ್‌ಗೆ ತನ್ನ ಹಿಂದಿನ ಪತ್ರವನ್ನು ಉಲ್ಲೇಖಿಸಿ, ಎಲ್ಲ ಕಾರಣಗಳನ್ನು ಈಗಾಗಲೇ ಸಾರ್ವಜನಿಕಗೊಳಿಸಲಾಗಿದೆ ಎಂದು ಹೇಳಿದೆ. ಈ ಕುರಿತ ಹೆಚ್ಚಿನ ಚರ್ಚೆಗಾಗಿ ಡಿ. 3ರಂದು ಅಪೆಕ್ಸ್ ಪೋಲ್ ಬಾಡಿ ಕಾಂಗ್ರೆಸ್ (The apex poll body) ನಿಯೋಗವನ್ನು ಆಹ್ವಾನಿಸಿದೆ .ಅಷ್ಟೇ ಅಲ್ಲದೆ ಚುನಾವಣಾ ಸಮಿತಿಯು ಕಾಂಗ್ರೆಸ್‌ನ ಎಲ್ಲ ಕಾನೂನುಬದ್ಧ ಕಾಳಜಿಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದೆ.
The Election Commission told the Congress that all poll procedures followed in Maharashtra during the counting of votes were transparent and assured the party that it would review all its legitimate concerns. https://t.co/KpB99m4C2D
— IndiaToday (@IndiaToday) November 30, 2024
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನ. 20ರಂದು ಮತದಾನ ನಡೆದಿದ್ದು, ನ. 23ರಂದು ಫಲಿತಾಂಸ ಪ್ರಕಟಗೊಂಡಿದೆ. ಮಹಾಯುತಿ ಮೈತ್ರಿಕೂಟ ಪ್ರಚಂಡ ಬಹುಮತ ಗಳಿಸಿದ್ದು, ಬಿಜೆಪಿ 132 ಸ್ಥಾನಗಳನ್ನು ಗೆದ್ದಿದೆ. 288 ಸದಸ್ಯ ಬಲದ ಸದನದಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಕ್ರಮವಾಗಿ 57 ಮತ್ತು 41 ಸ್ಥಾನಗಳನ್ನು ಗೆದ್ದಿವೆ. ಕಾಂಗ್ರೆಸ್ ಕೇವಲ 16 ಸ್ಥಾನಗಳನ್ನು ಗೆದ್ದರೆ, ಮೈತ್ರಿಕೂಟ ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ಕ್ರಮವಾಗಿ 20 ಮತ್ತು 10 ಸ್ಥಾನಗಳನ್ನು ಗೆದ್ದಿವೆ.
ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆಯಾಗಲಿದ್ದು, ಏಕನಾಥ ಶಿಂಧೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈವರೆಗೂ ಹೊಸ ಮುಖ್ಯಮಂತ್ರಿಯ ಹೆಸರು ಘೋಷಣೆಯಾಗಿಲ್ಲ. ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಕುತೂಹಲ ಹಾಗೇ ಉಳಿದುಕೊಂಡಿದೆ. ಇಂದು ಬಹುತೇಕ ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿಯ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ.
ಈ ಸುದ್ದಿಯನ್ನೂ ಓದಿ: ಮಹಾರಾಷ್ಟ್ರದ ಮಾಜಿ ಸಿಎಂ ಮನೋಹರ್ ಜೋಶಿ ನಿಧನ