Saturday, 23rd November 2024

Election Results: ʻಉತ್ತಮ ಆಡಳಿತ, ಅಭಿವೃದ್ದಿಗೆ ಸಿಕ್ಕ ಜಯʼ-ಮಹಾರಾಷ್ಟ್ರದ ಗೆಲುವಿಗೆ ಪಿಎಂ ಮೋದಿ ಸಂತಸ!

'Development, Good Governance Win': PM Modi Hails Mahayuti's Maharashtra Victory

ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ (Election Results) ಫಲಿತಾಂಶ ಹೊರಬಿದ್ದಿದೆ. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಬಂಪರ್ ಗೆಲುವು ದಾಖಲಿಸಿದೆ. ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟವು ಮೂರನೇ ಎರಡರಷ್ಟು ಸ್ಥಾನಗಳನ್ನು ಪಡೆಯುತ್ತಿದೆ. ಈ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರತಿಕ್ರಿಯಿಸಿದ್ದಾರೆ. ಉತ್ತಮ ಆಡಳಿತ ಹಾಗೂ ಅಭಿವೃದ್ದಗೆ ಸಿಕ್ಕ ಗೆಲುವು ಇದಾಗಿದೆ ಎಂದು ಮೋದಿ ಮಹಾರಾಷ್ಟ್ರದ ಮಹಾಯುತಿಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಮಹಾವಿಕಾಸ್ ಅಘಾಡಿಗೆ 50 ಸ್ಥಾನಗಳನ್ನು ತಲುಪುವುದು ಕಷ್ಟಕರವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಅದ್ಭುತ ಗೆಲುವಿ ನ ಬಗ್ಗೆ ಟ್ವೀಟ್‌ ಮಾಡಿದ ಪ್ರಧಾನಿ, ಒಂದಾಗುವ ಮೂಲಕ ನಾವು ಇನ್ನಷ್ಟು ಎತ್ತರಕ್ಕೆ ಏರುತ್ತೇವೆ ಎಂದಿದ್ದಾರೆ. ಅಷ್ಟೇ ಅಲ್ಲ, ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟದ ಗೆಲುವಿಗೆ ಪ್ರಧಾನಿ ಮೋದಿ ಹೇಮಂತ್ ಸೊರೆನ್ ಅವರನ್ನು ಅಭಿನಂದಿಸಿದ್ದಾರೆ.

Maharashtra government: ಮಹಾರಾಷ್ಟ್ರದಲ್ಲಿ ʻಗೋವು ರಾಜ್ಯಮಾತೆʼ; ಚುನಾವಣೆಗೂ ಮುನ್ನ ಸರ್ಕಾರದಿಂದ ಮಹತ್ವದ ಘೋಷಣೆ

ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕ್ರಿಯೆ

“ಅಭಿವೃದ್ಧಿಗೆ ಜಯ! ಉತ್ತಮ ಆಡಳಿತಕ್ಕೆ ಜಯ! ಒಟ್ಟಿಗೆ ನಾವು ಇನ್ನೂ ಎತ್ತರಕ್ಕೆ ಏರುತ್ತೇವೆ! ಎನ್‌ಡಿಎಗೆ ಐತಿಹಾಸಿಕ ಜನಾದೇಶ ನೀಡಿದ್ದಕ್ಕಾಗಿ ಮಹಾರಾಷ್ಟ್ರದ ನನ್ನ ಸಹೋದರ ಸಹೋದರಿಯರಿಗೆ, ವಿಶೇಷವಾಗಿ ರಾಜ್ಯದ ಯುವಕರು ಮತ್ತು ಮಹಿಳೆಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಈ ಪ್ರೀತಿ ಮತ್ತು ಬೆಂಬಲ ಅನನ್ಯವಾಗಿದೆ. ನಮ್ಮ ಮೈತ್ರಿಯು ಮಹಾರಾಷ್ಟ್ರದ ಪ್ರಗತಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ನಾನು ಜನರಿಗೆ ಭರವಸೆ ನೀಡುತ್ತೇನೆ. ಜೈ ಮಹಾರಾಷ್ಟ್ರ,” ಎಂದು ನರೇಂದ್ರ ಮೋದಿಯವರು ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ಮುಂದಿನ ಟ್ವೀಟ್‌ನಲ್ಲಿ “ಎನ್‌ಡಿಎಯ ಸಾರ್ವಜನಿಕ ಸ್ನೇಹಿ ಪ್ರಯತ್ನಗಳ ಪ್ರತಿಧ್ವನಿ ಎಲ್ಲೆಡೆ ಕೇಳಿಬರುತ್ತಿದೆ. ವಿವಿಧ ಉಪಚುನಾವಣೆಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿದ್ದಕ್ಕಾಗಿ ನಾನು ವಿವಿಧ ರಾಜ್ಯಗಳ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಈಡೇರಿಸಲು ನಾವು ಬದ್ದರಾಗಿದ್ದೇವೆ,” ಎಂದು ತಿಳಿಸಿದ್ದಾರೆ.

ತಳಮಟ್ಟದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬ ಎನ್‌ಡಿಎ ಕಾರ್ಯಕರ್ತರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಪ್ರಧಾನಿ ಮೋದಿ ಮುಂದಿನ ಟ್ವೀಟ್‌ನಲ್ಲಿ ಹೇಳಿದ್ದಾರೆ. ಅವರು ಶ್ರಮಿಸಿದರು, ಜನರ ನಡುವೆ ಹೋದರು ಮತ್ತು ನಮ್ಮ ಉತ್ತಮ ಆಡಳಿತದ ಕಾರ್ಯಸೂಚಿಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.

ಜಾರ್ಖಂಡ್‌ನಲ್ಲಿ ಜೆಎಂಎಂ ಮೈತ್ರಿಕೂಟದ ಗೆಲುವಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರತಿಕ್ರಿಯಿಸಿದ್ದಾರೆ. “ನಮಗೆ ಬೆಂಬಲ ನೀಡಿದ ಜಾರ್ಖಂಡ್ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ರಾಜ್ಯಕ್ಕಾಗಿ ಕೆಲಸ ಮಾಡುವಲ್ಲಿ ಸದಾ ಮುಂಚೂಣಿಯಲ್ಲಿರುತ್ತೇವೆ. ರಾಜ್ಯದಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟದ ಸಾಧನೆಗಾಗಿ ನಾನು ಅಭಿನಂದಿಸುತ್ತೇನೆ,” ಎಂದು ಪಿಎಂ ಮೋದಿ ಮತ್ತೊಂದು ಟ್ವೀಟ್‌ ಮಾಡಿದ್ದಾರೆ.