Saturday, 14th December 2024

ವಿದ್ಯುತ್ ಪ್ರವಹಿಸಿ ನಾಲ್ವರು ಪ್ರಯಾಣಿಕರ ಬಲಿ, ಹತ್ತು ಮಂದಿಗೆ ಗಾಯ

ತಂಜಾವೂರು: ಖಾಸಗಿ ಬಸ್ ನಲ್ಲಿ ವಿದ್ಯುತ್ ಪ್ರವಹಿಸಿ ನಾಲ್ವರು ಪ್ರಯಾಣಿಕರು ಬಲಿಯಾಗಿದ್ದಾರೆ. ತಮಿಳುನಾಡಿನ ತಂಜಾ ವೂರು ಜಿಲ್ಲೆಯಲ್ಲಿ ಘಟನೆ ನಡೆದಿದೆ. ಹತ್ತು ಮಂದಿ ಪ್ರಯಾಣಿಕರು ವಿದ್ಯುದಾಘಾತದಿಂದ ಗಾಯಗೊಂಡಿದ್ದಾರೆ.

ತಂಜಾವೂರಿನ ತಿರುವೈಯಾರು ಸಮೀಪ ಮಂಗಳವಾರ ಟ್ರಕ್ ಒಂದನ್ನು ಖಾಸಗಿ ಬಸ್ ಹಿಂದಿಕ್ಕುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಗೆ ತಗುಲಿ ಈ ಅನಾಹುತ ಸಂಭವಿಸಿದೆ.

ಖಾಸಗಿ ಬಸ್ ಕಲ್ಲಾನೈನಿಂದ ತಂಜಾವೂರು ಮೂಲಕ ಮಾರಿಗುಡಿಗೆ ಸಾಗುತ್ತಿತ್ತು. ವರಗೂರು ಸಮೀಪದಲ್ಲಿ ಟ್ರಕ್ ಒಂದನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದಾಗ ಚಾಲಕ ನಿಯಂತ್ರಣ ಕಳೆದುಕೊಂಡು ಪೈಪ್‌ಗಳಿಗಾಗಿ ತೋಡಲಾಗಿದ್ದ ಗುಂಡಿ ಯೊಂದಕ್ಕೆ ಇಳಿಸಿದ. ಆಗ ಮೇಲಿನ ವಿದ್ಯುತ್ ಕೇಬಲ್‌ಗಳು ಬಸ್‌ಗೆ ತಗುಲಿ ವಿದ್ಯುತ್ ಹರಿದಿದೆ.

ಮೃತರನ್ನು ಕವಿತಾ, ನಟರಾಜನ್, ಕಲ್ಯಾಣರಾಮನ್ ಮತ್ತು ಗಣೇಶನ್ ಎಂದು ಗುರುತಿಸಲಾಗಿದೆ. ವಿದ್ಯುತ್ ಆಘಾತದಿಂದ ಗಾಯಗೊಂಡವರನ್ನು ತಿರುಕಟ್ಟುಪಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.