Wednesday, 11th December 2024

Emergency Movie: ʻಎಮರ್ಜೆನ್ಸಿʼ ಸಿನಿಮಾ ರಿಲೀಸ್‌ ಡೇಟ್‌ ಮತ್ತೆ ಮುಂದಕ್ಕೆ; ಕಂಗನಾ ಭಾವುಕ ಪೋಸ್ಟ್‌

emergency Movie

ನವದೆಹಲಿ: ಕಂಗನಾ ರಣಾವತ್‌(Kangana Ranaut) ನಟಿಸಿ ನಿರ್ದೇಶಿಸಿರುವ ಬಾಲಿವುಡ್‌ನ ‘ಎಮರ್ಜೆನ್ಸಿ’  (Emergency Movie) ಸಿನಿಮಾಗೆ ಸದ್ಯದಲ್ಲಿ ರಿಲೀಸ್‌ ಭಾಗ್ಯ ಸಿಗುವಂತಿಲ್ಲ. ಇಂದು ಬಿಡುಗಡೆಯಾಗಬೇಕಿದ್ದ ಸಿನಿಮಾ ರಿಲೀಸ್‌ ಡೇಟ್‌ ಮತ್ತೆ ಮುಂದೂಡಲಾಗಿದೆ. ಸೆನ್ಸಾರ್‌ ಮಂಡಳಿಯಿಂದ ಪ್ರಮಾಣಪತ್ರ ಸಿಗದಿರುವ ಹಿನ್ನೆಲೆ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಕಂಗನಾ ಹೇಳಿದ್ದಾರೆ.

ಈ ಬಗ್ಗೆ ಕಂಗನಾ ರಣಾವತ್‌ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ನಾನು ನಿರ್ದೇಶಿರುವ ಎಮರ್ಜೆನ್ಸಿ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಸೆನ್ಸಾರ್‌ ಮಂಡಳಿಯಿಂದ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದೇನೆ. ಚಿತ್ರ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುತ್ತೇನೆ. ನನ್ನನ್ನು ಅರ್ಥಮಾಡಿಕೊಂಡಿದ್ದಕ್ಕೆ ಮತ್ತು ನಿಮ್ಮ ತಾಳ್ಮೆಗೆ ಅನಂತ ಅನಂತ ಧನ್ಯವಾದ ಎಂದು ಕಂಗನಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸೆನ್ಸಾರ್‌ ಮಂಡಳಿ(CBFC) ಇನ್ನೂ ಪ್ರಮಾಣ ಪತ್ರ ನೀಡದಿರುವ ಹಿನ್ನೆಲೆ ಹೈಕೋರ್ಟ್‌ ಮೆಟ್ಟಿಲೇರಿರುವ ಕಂಗನಾ ರಣಾವತ್‌(Kangana Ranaut) ನಟಿಸಿ ನಿರ್ದೇಶಿಸಿರುವ ಬಾಲಿವುಡ್‌ನ ‘ಎಮರ್ಜೆನ್ಸಿ’  (Emergency Movie) ಚಿತ್ರತಂಡಕ್ಕೆ ಅಲ್ಲೂ ಹಿನ್ನಡೆಯಾಗಿದೆ. ಪ್ರಮಾಣ ಪತ್ರ ನೀಡುವಂತೆ ಸೆನ್ಸಾರ್‌ ಮಂಡಳಿಗೆ ಆದೇಶ ನೀಡಲು ಕೋರ್ಟ್‌ ನಿರಾಕರಿಸಿದೆ.

ಮಧ್ಯಪ್ರದೇಶ ಹೈಕೋರ್ಟ್ ಈಗಾಗಲೇ ಸಿಬಿಎಫ್‌ಸಿಗೆ ನಿರ್ದೇಶನ ನೀಡಿದೆ. ಇಂದು ನಾವು ಯಾವುದೇ ಆದೇಶ ಹೊರಡಿಸಿದರೆ ನೀಡಿದರೆ ಅದು ನೇರವಾಗಿ ಆದೇಶಕ್ಕೆ ವಿರುದ್ಧವಾಗಿರುತ್ತದೆ. ನಾವು ಇಂದು ಯಾವುದೇ ಆದೇಶವನ್ನು ಜಾರಿಗೊಳಿಸಿದರೆ ಮತ್ತೊಂದು ಹೈಕೋರ್ಟ್‌ ಆದೇಶವನ್ನು ಉಲ್ಲಂಘಿಸಲು ನಾವು CBFC ಗೆ ಹೇಳಿದಂತಾಗುತ್ತದೆ. ನಾವು ಅದನ್ನು ಮಾಡಲು ಸಾಧ್ಯವಿಲ್ಲ. ಸೆನ್ಸಾರ್ ಮಂಡಳಿಯು ಚಿತ್ರದ ವಿರುದ್ಧ ಎತ್ತಿರುವ ಆಕ್ಷೇಪಣೆಗಳನ್ನು ಪರಿಗಣಿಸಿ ನಂತರ ಸೆಪ್ಟೆಂಬರ್ 18 ರೊಳಗೆ ಪ್ರಮಾಣೀಕರಿಸುವಂತೆ ಬಾಂಬೆ ಹೈಕೋರ್ಟ್ ಹೇಳಿದೆ.

ಮಧ್ಯಪ್ರದೇಶ ಕೋರ್ಟ್‌ ಹೇಳೋದೇನು?

ಮಂಗಳವಾರ, ಮಧ್ಯಪ್ರದೇಶ ಹೈಕೋರ್ಟ್ ಕಂಗನಾ ರಣಾವತ್ ಅಭಿನಯದ ಚಿತ್ರದಲ್ಲಿ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ದೃಶ್ಯಗಳನ್ನು ಒಳಗೊಂಡಿದೆ ಮತ್ತು ಆದ್ದರಿಂದ ಅಶಾಂತಿಯನ್ನು ಉಂಟುಮಾಡಬಹುದು ಎಂದು ಸಿಖ್ ಗುಂಪುಗಳು ಸಲ್ಲಿಸಿದ ಅರ್ಜಿಗಳನ್ನು ವಿಚಾರಣೆ ನಡೆಸಿತು. ಚಿತ್ರಕ್ಕೆ ಪ್ರಮಾಣಪತ್ರ ನೀಡುವ ಮೊದಲು ಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅರ್ಜಿದಾರ ಸಿಖ್ ಗುಂಪುಗಳ ಪ್ರಾತಿನಿಧ್ಯವನ್ನು ಪರಿಗಣಿಸುವಂತೆ ಸೆನ್ಸಾರ್ ಮಂಡಳಿಗೆ ನ್ಯಾಯಾಲಯ ಸೂಚಿಸಿದೆ.

ಕಂಗನಾ ರಾಣಾವತ್‌ ಮೊದಲ ಬಾರಿಗೆ ಏಕಾಂಗಿಯಾಗಿ ಆ್ಯಕ್ಷನ್‌ ಕಟ್‌ ಹೇಳಿರುವ ʼಎಮರ್ಜೆನ್ಸಿʼ ಸಿನಿಮಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನ್ನಾಧರಿಸಿದೆ. ಅದರಲ್ಲಿಯೂ ಅವರು 1975 ರಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ಬಗ್ಗೆ ಈ ಚಿತ್ರ ಬೆಳಕು ಚೆಲ್ಲಲಿದೆ. ಇದೇ ಕಾರಣಕ್ಕೆ ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಸದ್ದು ಮಾಡುತ್ತಿದೆ.

ಈ ಸುದ್ದಿಯನ್ನೂ ಓದಿ: Emergency Movie: ʻಎಮರ್ಜೆನ್ಸಿʼ ರಿಲೀಸ್‌ಗೆ ಸೆನ್ಸಾರ್‌ ವಿಘ್ನ- ಕೋರ್ಟ್‌ ಮೆಟ್ಟಿಲೇರಿದ ಚಿತ್ರತಂಡ