Sunday, 6th October 2024

ಅನಂತನಾಗ್‌, ಕುಲ್ಗಾಮ್‌’ನಲ್ಲಿ ಪ್ರತ್ಯೇಕ ಎನ್‌ಕೌಂಟರ್‌: ಆರು ಉಗ್ರರ ಹತ್ಯೆ

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್‌ ಹಾಗೂ ಕುಲ್ಗಾಮ್‌ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಪಾಕಿಸ್ತಾನದ ಇಬ್ಬರು ಸೇರಿ ಜೈಶೆ-ಮೊಹಮ್ಮದ್‌ (ಜೆಇಎಂ) ಸಂಘಟನೆಯ ಆರು ಉಗ್ರರು ಹತ್ಯೆ ಯಾಗಿ, ಯೋಧರೊಬ್ಬರು ಹುತಾತ್ಮ ರಾಗಿದ್ದಾರೆ.

ಅರೆಸೇನಾಪಡೆ, ಸೇನೆ ಹಾಗೂ ಪೊಲೀಸರು ನಡೆಸಿದ ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆಯಲ್ಲಿ ಉಗ್ರರು ಬಲಿಯಾಗಿದ್ದಾರೆ.

ಎರಡು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಆರು ಮಂದಿ ಜೆಇಎಂ ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಇಬ್ಬರು ಪಾಕಿಸ್ತಾನಿಗಳು, ಇಬ್ಬರು ಸ್ಥಳೀಯ ಉಗ್ರರಾಗಿದ್ದು, ಮತ್ತಿಬ್ಬರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆದಿದ್ದು, ಇದು ನಮಗೆ ಸಿಕ್ಕ ದೊಡ್ಡ ಯಶಸ್ಸು’ ಎಂದು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್‌ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ, ಎರಡೂ ಪ್ರದೇಶಗಳಲ್ಲೂ ಸ್ಥಳೀಯ ಪೊಲೀಸ್‌, ಸೇನೆ ಹಾಗೂ ಅರೆಸೇನಾ ಪಡೆ ಜಂಟಿ ಶೋಧ ಕಾರ್ಯಾ ಚರಣೆ ನಡೆಸಿದ್ದವು. ಈ ವೇಳೆ ಉಗ್ರರು ಅಪ್ರಚೋದಿತ ಗುಂಡಿನ ಸುರಿಮಳೆ ಗೈದರು. ಈ ವೇಳೆ ಭದ್ರತೆ ಪಡೆಗಳು ನಡೆಸಿದ ಪ್ರತಿ ಗುಂಡಿನ ದಾಳಿ ನಡೆಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌, ಇಬ್ಬರು ಯೋಧರು ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಯೋಧರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.

ಕುಲ್ಗಾಮ್‌ ಜಿಲ್ಲೆಯ ಮಿರ್ಹಾಮ ಗ್ರಾಮದಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತ್ಯೆಯಾಗಿದ್ದಾರೆ. ಹತ್ಯೆಯಾ ದವರನ್ನು ಮೊಹಮ್ಮದ್‌ ಶಫಿ ದಾರ್‌, ಉಜೈರ್‌ ಅಹ್ಮದ್‌, ಶಾಹಿದ್‌ ಅಲಿಯಾಸ್‌ ಶಹಜೈದ್‌ ಎಂದು ಗುರುತಿಸಲಾಗಿದ್ದು, ಶಾಹಿದ್‌ ಪಾಕಿಸ್ತಾನದ ಉಗ್ರನಾಗಿದ್ದು, ಉಳಿದ ಇಬ್ಬರು ಸ್ಥಳೀಯರಾಗಿದ್ದಾರೆ.

ದಕ್ಷಿಣ ಕಾಶ್ಮೀರದಲ್ಲಿ ಕಳೆದ ಒಂದು ವಾರದಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ 11 ಉಗ್ರರು ಹತರಾಗಿದ್ದಾರೆ.