Saturday, 5th October 2024

ಹಬ್ಬ ಆಚರಿಸಿ, ಕರೋನಾ ಕುರಿತು ಎಚ್ಚರವಹಿಸಿ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ನವದೆಹಲಿ: ನಮ್ಮ ನಡುವೆಯೇ ಕೋವಿಡ್ ಇದ್ದು, ಹಬ್ಬದ ಸಂಭ್ರಮದಲ್ಲಿ ಜನರು ಕರೋನಾ ಸೋಂಕನ್ನು ಮರೆಯಬಾರದು. ಮಾಸ್ಕ್ ಧರಿಸಿ ಮಾರ್ಗಸೂಚಿ ಗಳನ್ನು ಪಾಲನೆ ಮಾಡಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.

ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಅವರು, ಮುಂದಿನ ಎಲ್ಲಾ ಹಬ್ಬಗಳಿಗೆ ಶುಭಾಶಯ ಗಳನ್ನು ಕೋರಿದ್ದಾರೆ. ಬಳಿಕ ಲಸಿಕೆ ಕುರಿತು ಮಾತನಾಡಿದ ಅವರು, ಜನರು ಕೋವಿಡ್ ಲಸಿಕೆಯ ಭಯದಿಂದ ಹೊರಬರಬೇಕು. ಲಸಿಕೆ ಪಡೆದ ಬಳಿಕ ಜ್ವರ ಬರಬಹುದು. ಲಸಿಕೆ ಪಡೆಯುವುದನ್ನು ನಿರಾ ಕರಿಸುವುದು ಅದಕ್ಕಿಂತ ಅಪಾಯಕಾರಿ. ಲಸಿಕೆ ಪಡೆಯದೇ ನೀವು ನಿಮ್ಮ ಕುಟುಂಬ ಮತ್ತು ಊರಿನವರನ್ನೂ ಅಪಾಯಕ್ಕೆ ಸಿಲುಕಿಸುತ್ತೀರಿ ಎಂದು ತಿಳಿಸಿದ್ದಾರೆ.

ಮುಂಬರುವ ಎಲ್ಲಾ ಹಬ್ಬಗಳಿಗಾಗಿ ನಾನು ಜನರಿಗೆ ಶುಭ ಹಾರೈಸುತ್ತೇನೆ. ಆದರೆ ಕೋವಿಡ್ ಸೋಂಕು ಇನ್ನೂ ಸಂಪೂರ್ಣ ಹೋಗಿಲ್ಲ ಎಂದು ಮರೆಯಬಾರದು. ಹಬ್ಬಗಳ ಸಂದರ್ಭದಲ್ಲಿ ಕೋವಿಡ್ ನಿಯಮಗಳನ್ನು ಮರೆಯ ಬಾರದು ಎಂದು ಕರೆ ನೀಡಿದರು.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಎಲ್ಲಾ ಕ್ರೀಡಾಪಟುಗಳಿಗೆ ನೀವು ಸ್ಪೂರ್ತಿ ತುಂಬಿ. ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಪ್ರಧಾನಿ ಮೋದಿ ಜನರಿಗೆ ಕರೆ ನೀಡಿದರು.

ಈ ಬಾರಿ ಆಗಸ್ಟ್ 15ರಂದು ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವವನ್ನು ದೇಶ ಆಚರಣೆ ಮಾಡುತ್ತಿದೆ. ನಾವು 12 ಮಾರ್ಚ್‌ರಂದು ಅಮೃತ ಮಹೋತ್ಸವ ಯಾತ್ರೆಗೆ ಚಾಲನೆ ನೀಡಿದ್ದೇವೆ. ದೇಶದ ವಿವಿಧ ಭಾಗದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ಆಗಸ್ಟ್ 15ರಂದು ಎಷ್ಟು ಜನರು ಸಾಧ್ಯವೋ ಅಷ್ಟು ಜನರು ಸೇರಿಕೊಂಡು ರಾಷ್ಟ್ರಗೀತೆಯನ್ನು ಹಾಡಿ. ರಾಷ್ಟ್ರಗಾನ ಡಾಟ್ ಕಾಮ್ ಮೂಲಕ ರೆಕಾರ್ಡ್ ಮಾಡಲು ಅವಕಾಶವನ್ನು ನೀಡಲಾಗಿದೆ. ಈ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಿ ಎಂದರು.

ಬಾಳೆ ಮರದ ನಾರಿನಿಂದ ಇಂದು ಹ್ಯಾಂಡ್ ಬ್ಯಾಗ್ ತಯಾರು ಮಾಡಲಾಗುತ್ತಿದೆ. ಇದರಿಂದ ಮಹಿಳೆಯರಿಗೆ ಅವರ ಗ್ರಾಮದಲ್ಲಿಯೇ ಉದ್ಯೋಗ ಸಿಕ್ಕಿದೆ. ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಬಾಳೆಯ ವಿವಿಧ ಉತ್ಪನ್ನಗಳನ್ನು ಬಾಳೆ ಹಿಟ್ಟಿನಿಂದ ತಯಾರು ಮಾಡುತ್ತಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದರು.