Wednesday, 11th December 2024

ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ನಿಧನ

ಶಿಮ್ಲಾ: ಕಾಂಗ್ರೆಸ್ ಮುಖಂಡ, ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್(87) ನಿಧನರಾಗಿದ್ದಾರೆ.

ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಿಂಗ್‌ ಅವರನ್ನು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಐಜಿಎಂಸಿ) ದಾಖಲಿಸಲಾಗಿತ್ತು. ಗುರುವಾರ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

ಏಪ್ರಿಲ್ 12 ಮತ್ತು ಜೂನ್ 11 ರಂದು ಎರಡು ತಿಂಗಳಲ್ಲಿ ಎರಡು ಬಾರಿ ಕರೋನಾ ಸೋಂಕಿಗೆ ತುತ್ತಾಗಿದ್ದರು. ಏಪ್ರಿಲ್​ನಲ್ಲಿ ಮೊಹಾಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಏಪ್ರಿಲ್ 23 ರಂದು ಬಿಡುಗಡೆ ಮಾಡಲಾಯಿತು. ಆದರೆ ಶಿಮ್ಲಾಕ್ಕೆ ಆಗಮಿಸಿದಾಗ ಉಸಿರಾಟದ ತೊಂದರೆ ಉಂಟಾಗಿ ಮತ್ತೆ ಅವರನ್ನು ಐಜಿಎಂಸಿಗೆ ಸೇರಿಸಲಾಗಿತ್ತು. ಸಿಂಗ್ ಅವರನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ವೆಂಟಿಲೇಟರ್ ಸಹಾಯದಲ್ಲಿ ಇರಿಸಲಾಗಿತ್ತು.

ಆರು ಅವಧಿಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಸಿಂಗ್‌ ಅವರು, ಒಂಬತ್ತು ಬಾರಿ ಶಾಸಕ ಮತ್ತು ಐದು ಬಾರಿ ಸಂಸತ್ತಿನ ಸದಸ್ಯರಾಗಿದ್ದರು. ಮಾರ್ಚ್ 1998 ರಿಂದ ಮಾರ್ಚ್ 2003 ರವರೆಗೆ ಪ್ರತಿಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಇವರ ಪತ್ನಿ ಪ್ರತಿಭಾ ಸಿಂಗ್ ಮತ್ತು ಮಗ ವಿಕ್ರಮಾದಿತ್ಯ ಸಿಂಗ್ ಕೂಡ ರಾಜಕಾರಣಿಗಳು. ಪ್ರತಿಭಾ ಸಿಂಗ್ ಮಾಜಿ ಸಂಸದರಾಗಿದ್ದರೆ, ವಿಕ್ರಮಾದಿತ್ಯ ಶಿಮ್ಲಾ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದಾರೆ.