ನವದೆಹಲಿ: ಬ್ರೂನಿ, ಮೊಝಾಂಬಿಕ್ ಹಾಗೂ ಅಲ್ಜೀರಿಯಾದಲ್ಲಿ ಸೇವೆ ಸಲ್ಲಿಸಿದ್ದ ಮಾಜಿ ಭಾರತೀಯ ರಾಯಭಾರಿ ಅಶೋಕ್ ಅಮ್ರೋಹಿ ಅವರು ಗುರ್ಗಾಂವ್‍ನ ಮೇದಾಂತ ಆಸ್ಪತ್ರೆಯಲ್ಲಿ ದಾಖಲಾತಿಗಾಗಿ ಪಾರ್ಕಿಂಗ್ ಸ್ಥಳದಲ್ಲಿ ಸುಮಾರು ಐದು ಗಂಟೆಗಳ ಕಾಲ ಕಾದು ಕೊನೆಗೆ ತಮ್ಮ ಕಾರಿನಲ್ಲಿಯೇ ಕೊನೆಯುಸಿ ರೆಳೆದಿದ್ದಾರೆ.
ಅಶೋಕ್ ಅಮ್ರೋಹಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಟ್ವೀಟ್ ಕೂಡ ಮಾಡಿದ್ದರು. ಅವರ ನಿಧನದ ವಾರ್ತೆ ಕೇಳಿ ಅವರು ಸೇವೆ ಸಲ್ಲಿಸಿದ್ದ ದೇಶಗಳಿಂದ ಲೂ ಹಲವಾರು ಮಂದಿ ಸಂತಾಪ ಸೂಚಿಸಿದ್ದಾರೆ.
ಅಶೋಕ್ ಅಮ್ರೋಹಿ ಅವರ ಪತ್ನಿ ಯಾಮಿನಿ ಅವರ ಪ್ರಕಾರ ಅಶೋಕ್ ಅವರು ಕಳೆದೊಂದು ವಾರದಿಂದ ಅಸೌಖ್ಯದಿಂದಿದ್ದರು. ಅವರ ಸ್ಥಿತಿ ಬಿಗಡಾಯಿಸಿದಾಗ ಅವರನ್ನು ಆಸ್ಪತ್ತೆಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದ್ದರು, ಮೇದಾಂತ ಆಸ್ಪತ್ರೆಯಲ್ಲಿ ರಾತ್ರಿ 8 ಗಂಟೆಗೆ ಬೆಡ್ ಲಭಿಸಲಿದೆ ಎಂದೂ ವೈದ್ಯರು ತಿಳಿಸಿದ್ದರು. ಇದೇ ಕಾರಣದಿಂದ ಅಶೋಕ್ ಅಮ್ರೋಹಿ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಲಾಗಿತ್ತು. ಸುಮಾರು ಒಂದೂವರೆ ಗಂಟೆ ಕಾದ ನಂತರ ಕೋವಿಡ್ ಟೆಸ್ಟ್ ನಡೆಸುವಂತೆ ಸೂಚಿಸಲಾಗಿತ್ತು.
ಈ ನಡುವೆ ಅಶೋಕ್ ಅಮ್ರೋಹಿ ಅವರ ಸ್ಥಿತಿ ಇನ್ನಷ್ಟು ಚಿಂತಾಜನಕವಾಗಿತ್ತು. ಕಾರಿನ ಎದುರಿನ ಸೀಟಿನಲ್ಲಿಯೇ ಕುಳಿತಿದ್ದರು. ಆಸ್ಪತ್ರೆಯಿಂದ ಸ್ಟ್ರೆಚರ್ ಅಥವಾ ವೀಲ್ ಚೇರ್ ಕೂಡ ದೊರೆತಿರಲಿಲ್ಲ ಎಂದು ಅವರ ಕುಟುಂಬ ತಿಳಿಸಿದೆ. ಈ ನಡುವೆ ಆಕ್ಸಿಜನ್ ಸಿಲಿಂಡರ್ ಒಂದು ಕುಟುಂಬಕ್ಕೆ ಲಭ್ಯವಾದರೂ ಪ್ರಯೋಜನ ವಾಗಿರಲಿಲ್ಲ. ಮಧ್ಯರಾತ್ರಿ ವೇಳೆಗೆ ಕಾರಿನಲ್ಲಿ ಕುಳಿತಲ್ಲಿಯೇ ಅವರು ಇಹಲೋಕ ತ್ಯಜಿಸಿದರು ಎಂದು ಅವರ ಕುಟುಂಬ ಹೇಳಿದೆ.