Wednesday, 11th December 2024

ಖಾಸಗಿ ಬ್ಯಾಂಕ್ ಮ್ಯಾನೇಜರ್‌ ಹತ್ಯೆ: ಓರ್ವ ಆರೋಪಿ ಸೆರೆ

ಮಹಾರಾಷ್ಟ್ರ: ಖಾಸಗಿ ಬ್ಯಾಂಕ್ ನ ಮಹಿಳಾ ಅಧಿಕಾರಿಯನ್ನು ಅದೇ ಬ್ಯಾಂಕ್ ನ ಮಾಜಿ ಮ್ಯಾನೇಜರ್ ಚೂರಿಯಿಂದ ಹತ್ಯೆ ಮಾಡಿರುವ ಘಟನೆ ವರದಿ ಯಾಗಿದೆ. ಘಟನೆಯಲ್ಲಿ ಮತ್ತೊಬ್ಬ ಮಹಿಳಾ ಸಹೋದ್ಯೋಗಿ ಗಾಯಗೊಂಡಿರುವುದಾಗಿ ಪೊಲೀಸರು ಶುಕ್ರ ವಾರ ತಿಳಿಸಿದ್ದಾರೆ. ಘಟನೆ ಮಹಾರಾಷ್ಟ್ರದ ಪಾಲ್ಗಾಟ್ ಜಿಲ್ಲೆಯಲ್ಲಿ ನಡೆದಿದೆ.

ವಿರಾರ್ ನ ಐಸಿಐಸಿಐ ಬ್ಯಾಂಕ್ ಶಾಖೆಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ. ಘಟನೆ ವೇಳೆ ಇಬ್ಬರು ಮಾತ್ರ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸು ತ್ತಿದ್ದರು. ಆರೋಪಿಗಳಲ್ಲಿ ಅನಿಲ್ ದುಬೆ ಎಂಬಾತನ್ನು ಬಂಧಿಸಲಾಗಿದೆ.

ದುಬೆ ಹಾಗೂ ಮತ್ತೊಬ್ಬ ಆರೋಪಿ ಬ್ಯಾಂಕ್ ನೊಳಗೆ ಬಂದು ಅಸಿಸ್ಟೆಂಟ್ ಮ್ಯಾನೇಜರ್ ಯೋಗಿತಾ ವರ್ತಕ್ ಮತ್ತು ಕ್ಯಾಶಿಯರ್ ಶ್ರದ್ಧಾ ದೇವ್ರುಖಾರ್ ಗೆ ಚೂರಿ ತೋರಿಸಿ ಬೆದರಿಕೆ ಹಾಕಿದ್ದರು. ಅಲ್ಲದೇ ನಗದು ಮತ್ತು ಚಿನ್ನಾಭರಣ ಕೊಡುವಂತೆ ಒತ್ತಾಯಿಸಿದಾಗ, ಇಬ್ಬರು ಅಲಾರಾಂ ಒತ್ತಿ ದರೋಡೆ ತಡೆಯಲು ಯತ್ನಿಸಿದ್ದರು. ಆರೋಪಿಗಳು ಯೋಗಿತಾ ಮತ್ತು ಶ್ರದ್ಧಾಗೆ ಚೂರಿಯಿಂದ ಇರಿದು ಪರಾರಿಯಾಗಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಪೊಲೀಸರು ಆರೋಪಿ ದುಬೆಯನ್ನು ಬೆನ್ನಟ್ಟಿ ಸೆರೆ ಹಿಡಿದಿದ್ದು, ಮತ್ತೊಬ್ಬ ಪರಾರಿಯಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ಯೋಗಿತಾ ಅವರು ಬ್ಯಾಂಕ್ ನೊಳಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಶ್ರದ್ಧಾ ಗಂಭೀರವಾಗಿ ಗಾಯಗೊಂಡಿರುವುದನ್ನು ಸ್ಥಳೀಯರು ಗಮನಿಸಿ, ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಯೋಗಿತಾ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದ್ದು, ಪರಾರಿಯಾದ ಆರೋಪಿ ಬಂಧನಕ್ಕಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.