Sunday, 1st December 2024

Robbery Case : ಕೊರಿಯರ್ ಏಜೆಂಟ್ ಎಂದು ಬಿಂಬಿಸಿ ಮಾಜಿ ವಿಜ್ಞಾನಿ ದಂಪತಿಯಿಂದ 2 ಕೋಟಿ ರೂ. ದೋಚಿದ ಖದೀಮರು

Robbery

ನವದೆಹಲಿ: ನಿವೃತ್ತ ವಿಜ್ಞಾನಿ(scientist) ಹಾಗೂ ಅವರ ಪತ್ನಿಯನ್ನು ಅವರ ಮನೆಯಲ್ಲಿಯೇ ಹೆದರಿಸಿ ಬಂದೂಕು ತೋರಿಸಿ ಒತ್ತೆಯಾಳಾಗಿ ಇರಿಸಿಕೊಂಡು ಸುಮಾರು 2 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿರುವ ಘಟನೆ (Robbery Case) ದೆಹಲಿಯ ರೋಹಿಣಿ ನಗರದ(Rohini Nagar) ಪ್ರಶಾಂತ್ ವಿಹಾರ್(Prashant vihar) ಪ್ರದೇಶದಲ್ಲಿ ಶನಿವಾರ ನಡೆದಿದೆ. ಪ್ರಶಾಂತ್ ವಿಹಾರ್‌ನ ಎಫ್ ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು, ನಿವೃತ್ತ ವಿಜ್ಞಾನಿ ಶಿಬು ಸಿಂಗ್ ತಮ್ಮ ಪತ್ನಿ ನಿರ್ಮಲಾ ಜೊತೆ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು.

ಶುಕ್ರವಾರ ಮಧ್ಯಾಹ್ನ, ವೃದ್ಧ ದಂಪತಿಗಳು ತಮ್ಮ ಮನೆಯಲ್ಲಿದ್ದಾಗ, ಇಬ್ಬರು ವ್ಯಕ್ತಿಗಳು ತಮ್ಮನ್ನು ಕೊರಿಯರ್ ಹುಡುಗರಂತೆ ಪರಿಚಯ ಮಾಡಿಕೊಂಡು ಮನೆಯೊಳಗೆ ಪ್ರವೇಶಿಸಿದರು.ಮನೆಯೊಳಗೆ ಪ್ರವೇಶಿಸಿದ ನಂತರ, ಶಿಬು ಮತ್ತು ಅವರ ಪತ್ನಿ ನಿರ್ಮಲಾರನ್ನು ಹೆದರಿಸಿ ಬಂದೂಕು ತೋರಿಸಿದ್ದಾರೆ. ಸಿಂಗ್ ವಿರೋಧಿಸಿದಾಗ, ಆರೋಪಿಗಳು ಅವರ ಮೇಲೂ ಹಲ್ಲೆ ನಡೆಸಿದ್ದರು. ತದನಂತರ ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡು ನಗದು ಹಾಗೂ ಚಿನ್ನಾಭರಣವನ್ನು ದೋಚಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಬಳಿಕ ದೆಹಲಿಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರುವ ತಮ್ಮ ಮಗನಿಗೆ ಘಟನೆಯ ಬಗ್ಗೆ ನಿವೃತ್ತ ವಿಜ್ಞಾನಿ ತಿಳಿಸಿದ್ದಾರೆ. ಮಧ್ಯಾಹ್ನ ಸುಮಾರು 2.30ಕ್ಕೆ ಸಿಂಗ್ ಅವರ ಪುತ್ರ ಪಿಸಿಆರ್ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ತಂಡವು ಮನೆಗೆ ತಲುಪಿ ಸ್ಥಳದಿಂದ ಸಾಕ್ಷ್ಯವನ್ನು ಸಂಗ್ರಹಿಸಿದೆ. ಆರೋಪಿಗಳು ನಮ್ಮ ಕೈ ಕಟ್ಟಿ ಬಾಯಿ ಮುಚ್ಚಿ. ತನ್ನ ಮನೆಯಿಂದ 2 ಕೋಟಿ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಶಿಬು ಸಿಂಗ್ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಸಿಂಗ್‌ ದಂಪತಿಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಹೆಚ್ಚಿನ ತನಿಖೆ ಆರಂಭಿಸಲಾಗಿದೆ.

ಇದನ್ನೂ ಓದಿ: Supreme Court: ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ, ಡೌನ್ಲೋಡ್‌ ಶಿಕ್ಷಾರ್ಹ ಅಪರಾಧ; ಸುಪ್ರೀಂ ಖಡಕ್‌ ಆದೇಶ

ಆರೋಪಿಗಳನ್ನು ಗುರುತಿ ಅವರನ್ನು ಬಂಧಿಸಲು ಆರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೂ ಘಟನೆ ಸಂಭವಿಸಿದ ರೀತಿಯನ್ನು ಶಂಕಿಸಿದ ಪೋಲೀಸರು , ಪರಿಚಯಸ್ಥರು ಅಥವಾ ಕುಟುಂಬದ ಸದಸ್ಯರ ಮೇಲೇ ಅನುಮಾನ ವ್ಯಕ್ತ ಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗಿದ್ದು, ನೆರೆಹೊರೆಯವರು ಮತ್ತು ಇತರ ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ-ಎನ್‌ಸಿಆರ್‌ನಲ್ಲಿ ಹೆಚ್ಚುತ್ತಿರುವ ಅಪರಾಧಗಳು

ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶ ಗುರುಗ್ರಾಮ, ದೆಹಲಿ, ನೊಯ್ಡಾ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಪೊಲೀಸ್ ಅಧಿಕಾರಿಗಳ ವೇಷ ಧರಿಸಿ ಪ್ರಯಾಣಿಕರನ್ನು ದರೋಡೆ ಮಾಡಿದ್ದಕ್ಕಾಗಿ ಶಿಕೋಹ್‌ಪುರದಲ್ಲಿ ಮೂವರನ್ನು ಬಂಧಿಸಿದ ಘಟನೆ ಕೆಲ ದಿನಗಳ ಹಿಂದೆ ನಡೆದಿದೆ. ಆರೋಪಿಗಳು ಜನರನ್ನು ನಂಬಿಸಲು ನಕಲಿ ಪೊಲೀಸ್ ಸಂವಹನ ರೆಕಾರ್ಡಿಂಗ್‌ಗಳನ್ನು ಬಳಸಿ ಹೆದರಿಸುತ್ತಿದ್ದರು ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಬಂಧಿತರಿಂದ ಫೋರ್ಡ್ ಇಕೋಸ್ಪೋರ್ಟ್ ಕಾರು, ಚಾಕು, ನಗದು ಮತ್ತು ದಾಖಲೆಗಳನ್ನು ಪೋಲೀಸರು ವಶ ಪಡೆಸಿಕೊಂಡಿದ್ದಾರೆ.