Friday, 13th December 2024

Express Train hit: ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ- ಹಳಿಯಲ್ಲಿ ಕಸ ಹೆಕ್ಕುತ್ತಿದ್ದ ನಾಲ್ವರು ಕಾರ್ಮಿಕರ ದುರ್ಮರಣ

Railway incident

ತಿರುವನಂತಪುರಂ : ಕೇರಳದ (Kerala) ಪಾಲಕ್ಕಾಡ್ ಜಿಲ್ಲೆಯ ಶೋರ್ನೂರ್ ಬಳಿ ಶನಿವಾರ ಎಕ್ಸ್‌ಪ್ರೆಸ್ ರೈಲು(ಏxpress train ) ಡಿಕ್ಕಿ ಹೊಡೆದು (Express Train hit) ನಾಲ್ಕು ಗುತ್ತಿಗೆ ಕಾರ್ಮಿಕರು ಮೃತಪಟ್ಟ ಘಟನೆ ನಡೆದಿದೆ. ಮಧ್ಯಾಹ್ನ 3 ಗಂಟೆ ಸುಮಾರಿಗೆ ತಿರುವನಂತಪುರಂ(Thiruvananthapuram) ಕಡೆಗೆ ಹೊರಟಿದ್ದ ಕೇರಳ ಎಕ್ಸ್‌ಪ್ರೆಸ್‌ ರೈಲು ಕಸ ತೆರವುಗೊಳಿಸುತ್ತಿದ್ದ ಸ್ವಚ್ಛತಾ ಕೆಲಸಗಾರರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಲಿಯಾದವರಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು. ಮೃತ ಮಹಿಳೆಯರನ್ನು ತಮಿಳುನಾಡು ಮೂಲದವರು ಎಂದು ಗುರುತಿಸಿದ್ದು, ಇನ್ನಿಬ್ಬರ ಗುರುತು ಪತ್ತೆಯಾಗಬೇಕಾಗಿದೆ.

ರೈಲು ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಶೋರನೂರ್ ಸೇತುವೆಯ ಬಳಿ ರೈಲ್ವೆ ಹಳಿಯಿಂದ ಕಸವನ್ನು ತೆರವುಗೊಳಿಸುತ್ತಿದ್ದಾಗ ರೈಲು ಡಿಕ್ಕಿಯಾಗಿದೆ ಎಂದು ಹೇಳಲಾಗುತ್ತಿದೆ. ರೈಲು ಬರುತ್ತಿರುವುದನ್ನು ಕಾರ್ಮಿಕರು ಗಮನಿಸದೆ ಇರುವುದು ಈ ಘಟನೆಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳದಿಂದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ನಾಲ್ಕನೇ ಮೃತದೇಹದ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಮೃತದೇಹ ಸಮೀಪದ ಭಾರತಪುಳ ನದಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

“ನಮಗೆ ಬಂದ ಮಾಹಿತಿಯ ಆಧಾರದ ಮೇಲೆ, ವ್ಯಕ್ತಿ 3 ಮತ್ತು 4 ಪಿಲ್ಲರ್‌ಗಳ ನಡುವೆ ನದಿಗೆ ಬಿದ್ದಿದ್ದಾರೆ. ಈ ಪ್ರದೇಶದಲ್ಲಿ ನೀರೊಳಗಿನ ಸೆಳೆತ ಪ್ರಬಲವಾಗಿವೆ ಮತ್ತು ರಾತ್ರಿಯಾಗುತ್ತಿದ್ದಂತೆ ಗೋಚರತೆ ಕಡಿಮೆಯಾಗಿದೆ. ಪಾಲಕ್ಕಾಡ್‌ನಿಂದ ಸ್ಕೂಬಾ ತಂಡ ಬಂದ ನಂತರ ಹುಡುಕಾಟ ಪುನರಾರಂಭವಾಗುತ್ತದೆ. ಸಾಧ್ಯವಾದರೆ ಇಂದೇ ಪುನರಾರಂಭಿಸುತ್ತೇವೆ. ಇಲ್ಲದಿದ್ದರೆ ನಾಳೆಯಿಂದ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಗ್ನಿ ಶಾಮಕದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ Chennai Train Accident: ಭೀಕರ ರೈಲು ದುರಂತದ ಡ್ರೋನ್‌ ವಿಡಿಯೋ ವೈರಲ್

ಕೆಲವು ದಿನಗಳ ಹಿಂದೆ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ವರ್ಷದ ವಿದ್ಯಾರ್ಥಿಯೊಬ್ಬ ರೈಲಿಗೆ ಸಿಲುಕಿ ಮೃತಪಟ್ಟಿರುವುದು ತಿಳಿದು ಬಂದಿದೆ. ಮೃತನನ್ನು ಮನರಾಜ್ ತೋಮರ್ ಎಂದು ಗುರುತಿಸಲಾಗಿದೆ. ಬಿಬಿಎ ಓದುತ್ತಿದ್ದ ಎಂದು ಗೊತ್ತಾಗಿದೆ. ರೈಲ್ವೆ ಹಳಿಯ ಮೆಲೆ ಹೆಡ್‌ ಪೋನ್‌ ಹಾಕಿಕೊಂಡು ಮೊಬೈಲ್‌ ನೋಡುತ್ತಾ ಕುಳಿತಿದ್ದ. ಹೆಡ್‌ ಪೋನ್‌ ಹಾಕಿದ್ದ ಪರಿಣಾಮ ರೈಲು ಬರುವ ಸದ್ದು ಆತನಿಗೆ ಕೇಳಲಿಲ್ಲ ಪರಿಣಾಮ ರೈಲು ಡಿಕ್ಕಿಯಾಗಿದೆ. ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತೋಮರ್ ಅವರ ಪೋಷಕರಿಗೆ ಏಕೈಕ ಮಗನಾಗಿದ್ದ ಎಂದು ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಯ ನಂತರ ಅವರ ದೇಹವನ್ನು ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.