ನವದೆಹಲಿ: ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್(Ballot Papers) ವ್ಯವಸ್ಥೆ ಬೇಕೆಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ ಎನ್ನಲಾದ ವಿಡಿಯೊವೊಂದು ಈಗ ಸಾಕಷ್ಟು ವೈರಲ್ ಆಗುತ್ತಿದೆ. ಮೋದಿ ಅವರ ಹಳೆಯ ಭಾಷಣದ ವೊಡಿಯೋ ಕತ್ತರಿಸಿ, ಬೇರೆ ಅರ್ಥ ಬರುವಂತೆ ಒಂದಷ್ಟು ಮಂದಿ ಹಂಚಿಕೊಂಡಿದ್ದು, ಖುದ್ದು ಕಾಂಗ್ರೆಸ್ ನ ಕೆಲ ನಾಯಕರು ಶೇರ್ ಮಾಡಿಕೊಳ್ಳುವ ಮೂಲಕ ಟೀಕಿಸಿದ್ದಾರೆ (Fact Check).
ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಚುನಾವಣೆಯ ಬಳಿಕ ಇವಿಎಂ ಕುರಿತು ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ವಿರೋಧ ಪಕ್ಷಗಳು ಮತ ಎಣಿಕೆ ಪ್ರಕ್ರಿಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಮತಯಂತ್ರದ ಬದಲಾಗಿ ಹಳೆಯ ಪದ್ಧತಿಯಾದ ಬ್ಯಾಲೆಟ್ ಪೇಪರ್‌ಗಳನ್ನೇ ತರಬೇಕು ಎಂಬಂತೆ ಆಗ್ರಹಿಸುತ್ತಿವೆ.
🚨🚨Elections should be conducted using ballot papers rather than EVMs.
— Mohit Chauhan (@newt0nlaws) November 28, 2024
Even the people of America use ballot paper not EVMs.
—Narendra Modi before 2014 pic.twitter.com/ZAS6Oeg8wK
ಈ ಮಧ್ಯೆ ಬ್ಯಾಲೆಟ್ ಪೇಪರ್ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ ಎಂಬಂಥ ಹೇಳಿಕೆಗಳು ಹರಿದಾಡುತ್ತಿವೆ. 30 ಸೆಕೆಂಡಿನ ವಿಡಿಯೊದಲ್ಲಿ “ಮುಂದುವರಿದ ದೇಶಗಳಲ್ಲೂ ಬ್ಯಾಲೆಟ್ ಪೇಪರ್ ಗಳನ್ನೇ ಬಳಸುತ್ತಿದ್ದಾರೆ” ಎಂಬಂತೆ ಮೋದಿ ಅವರು ಹೇಳುವುದು ಕೇಳಿಸುತ್ತದೆ.
ಈ ಕುರಿತು Fact Checkಗಳು ನಡೆದಿದ್ದು,ಅದು ನಕಲಿ/ತಪ್ಪಾಗಿ ಗ್ರಹಿಸಿದ ವಿಡಿಯೊ ಎಂದು ತಿಳಿದು ಬಂದಿದೆ. ತಿರುಚಿ ಬಳಸಲಾದ ಸಂಪೂರ್ಣ ವಿಡಿಯೊವು ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ದೊರೆತಿದ್ದು, ಅದರಲ್ಲಿ “ಭಾರತವನ್ನು ಬಡ ದೇಶ ಎಂದು ಕೆಲವರು ಹೇಳುತ್ತಾರೆ. ಅವರು ಅನಕ್ಷರಸ್ಥರು. ಅವರಿಗೆ ಗೊತ್ತಿಲ್ಲ. ವಿಶ್ವದ ವಿದ್ಯಾವಂತ ದೇಶಗಳು ಸಹ ಚುನಾವಣೆಗಳು ನಡೆದಾಗ ಬ್ಯಾಲೆಟ್ ಪೇಪರ್‌ಗಳಲ್ಲಿ ತಮ್ಮ ಹೆಸರುಗಳನ್ನು ಮುದ್ರೆ ಹಾಕುತ್ತವೆ. ಅಮೆರಿಕದಲ್ಲಿಯೂ ಸಹ ಇದು ನಡೆದಿದೆ. ಇದು ಹಿಂದೂಸ್ತಾನ, ಈ ದೇಶವನ್ನು ನೀವು ಅನಕ್ಷರಸ್ಥ ಮತ್ತು ಬಡವರ ದೇಶ ಎಂದು ಕರೆಯುತ್ತೀರಿ. ಆದರೆ ಇವಿಎಂನ ಗುಂಡಿ ಒತ್ತುವ ಮೂಲಕ ಹೇಗೆ ಮತ ಚಲಾಯಿಸಬೇಕೆಂದು ಈ ದೇಶದ ಜನರಿಗೆ ತಿಳಿದಿದೆ. ಭಾರತದ ಜನರ ಶಕ್ತಿಯನ್ನು ಕಡೆಗಣಿಸಬೇಡಿ” ಎಂದು ಮೋದಿ ಹೇಳಿರುವುದು ಕಂಡು ಬಂದಿದೆ.
ಆದರೆ ವೈರಲ್ ಆಗುತ್ತಿರುವ ವಿಡಿಯೊದಲ್ಲಿ “ಅಮೆರಿಕದಂತಹ ವಿಶ್ವದ ವಿದ್ಯಾವಂತ ದೇಶಗಳಲ್ಲಿ ಚುನಾವಣೆಗಳು ನಡೆದಾಗ ಇಂದಿಗೂ ಸಹ ಬ್ಯಾಲೆಟ್ ಪೇಪರ್‌ನಲ್ಲಿ ಮುದ್ರೆ ಹಾಕಲಾಗುತ್ತಿದೆ” ಎಂದಿದೆ.
ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದ ವೇದಿಕೆಯ ಮೇಲೆ ‘ಪರಿವರ್ತನ ಮಹಾ ರ‍್ಯಾಲಿ’ ಎನ್ನುವ ಬ್ಯಾನರ್ ಕಾಣಿಸುತ್ತಿದೆ. ಅದರ ಕೆಳಗೆ ಡಿಸೆಂಬರ್ 3, 2016 ಎಂದು ಬರೆಯಲಾಗಿದೆ. 2016ರ ಡಿಸೆಂಬರ್ 3ರಂದು ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ ‘ಉತ್ತರ ಪ್ರದೇಶದ ನ್ಯೂ ಮೊರಾದಾಬಾದ್‌ನಲ್ಲಿ ನಡೆದ ಪರಿವರ್ತನ ರ‍್ಯಾಲಿಯಲ್ಲಿ ಪ್ರಧಾನಿ ಮೋದಿಯವರ ಭಾಷಣ’ ಎಂಬ ಶೀರ್ಷಿಕೆಯಲ್ಲಿ 44 ನಿಮಿಷ, 39 ಸೆಕೆಂಡುಗಳ ವಿಡಿಯೊ ಸಿಕ್ಕಿದೆ. ಮೋದಿ ಅವರ ಭಾಷಣದ ವೈರಲ್ ಭಾಗವನ್ನು 37ನೇ ನಿಮಿಷದಲ್ಲಿ ವೀಕ್ಷಿಸಬಹುದು.
2016ರ ಡಿಸೆಂಬರ್ 3ರಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ಪರಿವರ್ತನ ರ‍್ಯಾಲಿಯ ವಿಡಿಯೊವನ್ನು ಪ್ರಧಾನಿ ನರೇಂದ್ರ ಮೋದಿಯವರ ಯೂಟ್ಯೂಬ್ ಚಾನೆಲ್‌ನಲ್ಲೂ ವೀಕ್ಷಿಸಬಹುದು. ವೈರಲ್ ವಿಡಿಯೊದ ಭಾಷಣದ ಭಾಗವನ್ನು 55 ನಿಮಿಷಗಳ ನಂತರ ವೀಕ್ಷಿಸಬಹುದು.
ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ, ಸುಶಿಕ್ಷಿತ ದೇಶದಲ್ಲಿ ಮತಪತ್ರಗಳಲ್ಲೇ ಇನ್ನೂ ಮತದಾನ ನಡೆಯುತ್ತಿರುವಾಗ ನಮ್ಮ ದೇಶವು ಮತಯಂತ್ರದ ಗುಂಡಿಯನ್ನು ಒತ್ತುವ ಮೂಲಕ ಮತ ಚಲಾಯಿಸುತ್ತಿದೆ ಎಂಬ ಅರ್ಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನು ನೀಡಿರುವುದನ್ನು ಗಮನಿಸಬಹುದು.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬ್ಯಾಲೆಟ್ ಪೇಪರ್ ವ್ಯವಸ್ಥೆ ಬೇಕೆಂದು ಹೇಳಿದ್ದಲ್ಲ, ಸುಶಿಕ್ಷಿತ ದೇಶದಲ್ಲಿ ಮತಪತ್ರಗಳಲ್ಲೇ ಇನ್ನೂ ಮತದಾನ ನಡೆಯುತ್ತಿರುವಾಗ ನಮ್ಮ ದೇಶವು ಮತಯಂತ್ರದ ಗುಂಡಿಯನ್ನು ಒತ್ತುವ ಮೂಲಕ ಮತ ಚಲಾಯಿಸುತ್ತಿದೆ ಎಂಬ ಅರ್ಥದಲ್ಲಿ ಹೇಳಿದ ಭಾಷಣದ ವಿಡಿಯೊವನ್ನು ಕತ್ತರಿಸಿ ಈಗಿನ ಇವಿಎಂ ಚರ್ಚೆಯ ಸಂದರ್ಭದಲ್ಲಿ ಕೆಲವರು ಹಂಚಿಕೊಳ್ಳುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: PM Narendra Modi: ಪ್ರಧಾನಿ ಮೋದಿ ಹತ್ಯೆಗೆ ಭಾರೀ ಸಂಚು? ಬೆದರಿಕೆ ಕರೆ ಮಾಡಿದ್ದ ಮಹಿಳೆ ಹೇಳಿದ್ದೇನು?