Friday, 13th December 2024

ನಕಲಿ ಎನ್‍ಕೌಂಟರ್‌: ಅಧಿಕಾರಿಗೆ ಜೀವಾವಧಿ ಶಿಕ್ಷೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ನಕಲಿ ಎನ್‍ಕೌಂಟರ್‍ನಲ್ಲಿ ಭಾಗಿಯಾಗಿದ್ದ ಅಧಿಕಾರಿಯೊಬ್ಬರಿಗೆ ಸೇನಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಕೆಲವು ದಿನಗಳ ಹಿಂದೆ ಕೋರ್ಟ್ ಮಾರ್ಷಲ್ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನಕಲಿ ಎನ್‍ಕೌಂಟರ್‍ನ ಆರೋಪಿ ಕ್ಯಾಪ್ಟನ್ ಭೂಪಿಂದರ್ ಸಿಂಗ್‍ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಜುಲೈ 2020 ರಲ್ಲಿ, ಶೋಪಿಯಾನ್ ಜಿಲ್ಲೆಯ ಅಮ್ಶಿಪೋರಾದಲ್ಲಿ ಮೂವರು ಕಾರ್ಮಿಕರು ಕೊಲ್ಲಲ್ಪಟ್ಟರು. ಅವರು ಪಾಕಿಸ್ತಾನಿ ಭಯೋತ್ಪಾದಕರು ಎಂದು ಸೇನಾ ಅಧಿಕಾರಿಗಳು ಹೇಳಿಕೊಂಡಿದ್ದರು ಮತ್ತು ಅವರ ಹತ್ಯೆಯೊಂದಿಗೆ ಜಿಲ್ಲೆಯಲ್ಲಿ ಭಯೋತ್ಪಾದಕ ಬೆದರಿಕೆಯನ್ನು ತೊಡೆದು ಹಾಕಲಾಯಿತು ಎಂದು ಬಿಂಬಿಸಲಾಗಿತ್ತು.

ಆದರೆ ಕೊಲೆಯಾದ ಮೂವರು ಯುವಕರು ರಾಜೌರಿ ಜಿಲ್ಲೆಯ ಸೋದರ ಸಂಬಂಧಿಗಳಾಗಿದ್ದು, ಅವರು ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿ ಕುಟುಂಬ ವರ್ಗದವರು ಪ್ರತಿಭಟನೆಗಿಳಿದ ನಂತರ ಸೇನೆಯು ಪ್ರಕರಣದ ತನಿಖೆಗೆ ಆದೇಶಿಸಿತು.