ನವದೆಹಲಿ: ಸುಳ್ಳು ದಾಖಲೆಗಳನ್ನು ನೀಡಿ ಸಿಮ್ ಕಾರ್ಡ್ ಪಡೆದವರಿಗೆ ಕೇಂದ್ರ ಸರ್ಕಾರವು ಬಿಗ್ ಶಾಕ್ ನೀಡಿದ್ದು, ನಕಲಿ ದಾಖಲೆಗಳೊಂದಿಗೆ ಪಡೆದ 55 ಲಕ್ಷ ಫೋನ್ ಸಂಖ್ಯೆಗಳನ್ನು ಕೇಂದ್ರವು ರದ್ದುಗೊಳಿಸಿದೆ.
ಕೇಂದ್ರವು ಕೆಲವು ಸಮಯದಿಂದ ಸಂಚಾರ್ ಸಾಥಿ ಎಂಬ ದೇಶಾದ್ಯಂತ ಮೊಬೈಲ್ ಸಂಖ್ಯೆ ಪರಿಶೀಲನಾ ಕಾರ್ಯಕ್ರಮವನ್ನು ನಡೆಸುತ್ತಿದೆ.
ಕಾನೂನುಬಾಹಿರ ವಿಧಾನಗಳ ಮೂಲಕ ಪಡೆದ ಸಿಮ್ ಕಾರ್ಡ್ ಗಳ ಮೂಲಕ ಸೈಬರ್ ಅಪರಾಧಗಳು ಮತ್ತು ಇತರ ಅಪರಾಧಗಳು ನಡೆಯದಂತೆ ತಡೆಯುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಲಕ್ಷಾಂತರ ಸಿಮ್ ಕಾರ್ಡ್ ಗಳು ಸರಿಯಾದ ಪ್ರಮಾಣಪತ್ರಗಳನ್ನು ಹೊಂದಿರಲಿಲ್ಲ. ಇದನ್ನು ಕೇಂದ್ರ ಸಂವಹನ ಸಚಿವ ದೇವಸಿನ್ಹ ಚೌಹಾಣ್ ಸಂಸತ್ತಿನಲ್ಲಿ ಬಹಿರಂಗಪಡಿಸಿದರು.
ಬೃಹತ್ ಪರಿಶೀಲನಾ ಅಭಿಯಾನ ನಡೆಸಲಾಗಿದೆ ಮತ್ತು ಸುಳ್ಳು ಪ್ರಮಾಣಪತ್ರಗಳೊಂದಿಗೆ ಪಡೆದ 55.52 ಲಕ್ಷ ಸಿಮ್ ಕಾರ್ಡ್ ಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ ಎಂದು ಹೇಳಿದರು. ಸೈಬರ್ ಅಪರಾಧಗಳಿಗೆ ಬಳಸುವ 1.32 ಲಕ್ಷ ಮೊಬೈಲ್ ಫೋನುಗಳನ್ನು ಸಹ ನಿರ್ಬಂಧಿಸಲಾಗಿದೆ.
ದೂರಿನ ಆಧಾರದ ಮೇಲೆ 13.42 ಲಕ್ಷ ಅನುಮಾನಾಸ್ಪದ ಫೋನ್ ಸಂಪರ್ಕಗಳನ್ನು ಸಹ ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.