Saturday, 14th December 2024

Farmers Protest: ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಪ್ರಯೋಗ; ಹತ್ತಾರು ಮಂದಿಗೆ ಗಾಯ

Farmers Protest

ನವದೆಹಲಿ: ಹರಿಯಾಣ-ಪಂಜಾಬ್ ಗಡಿಯಲ್ಲಿ ರೈತರು ಎಂಎಸ್‌ಪಿ (MSP) ಕಾನೂನಿಗೆ ಸಂಬಂಧಿಸಿ ಪ್ರತಿಭಟನೆ ನಡೆಸುತ್ತಿದ್ದು, (Farmers Protest) ಪ್ರತಿಭಟನಾ ನಿರತರನ್ನು ಚದುರಿಸಲು ಪೊಲೀಸರು  ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದ್ದಾರೆ. ಘಟನೆಯಲ್ಲಿ ಕನಿಷ್ಟ 10 ರೈತರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತರಿ ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಪಂಜಾಬ್‌ ಹರಿಯಾಣ ಸೇರಿದಂತೆ ಹಲವು ರಾಜ್ಯದ ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು ಕಾಂಗ್ರೆಸ್ ಮುಖಂಡ ಮತ್ತು ಕುಸ್ತಿಪಟು ಭಜರಂಗ್ ಪುನಿಯಾ (Bhajrang Punia) ಶಂಭು ಗಡಿಯಲ್ಲಿ ರೈತರಿಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಒಂದೆಡೆ ಸರಕಾರ ನಾವು ರೈತರನ್ನು ತಡೆಯುತ್ತಿಲ್ಲ ಎಂದು ಹೇಳುತ್ತಿದ್ದರೆ, ಇನ್ನೊಂದು ಕಡೆ ಅಶ್ರುವಾಯು ಪ್ರಯೋಗಿಸುತ್ತಿದ್ದಾರೆ. ಇದು ಪಾಕಿಸ್ತಾನದ ಗಡಿ ಎಂಬಂತೆ ನಡೆಸಿಕೊಳ್ಳಲಾಗುತ್ತಿದೆ. ನಾಯಕರು ದಿಲ್ಲಿಗೆ ಹೋಗಿ ಪ್ರತಿಭಟನೆ ನಡೆಸಲು ಅನುಮತಿ ಪಡೆಯುತ್ತಾರೆಯೇ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಡಿಸೆಂಬರ್‌ 6 ರಿಂದ ಈ ಪ್ರತಿಭಟನೆ ನಡೆಯುತ್ತಿದ್ದು, ಡಿ. 8 ರಂದೂ ರೈತರು ಪ್ರತಿಭಟನೆ ನಡೆಸಿದ್ದರು. ಆದರೆ ಭದ್ರತಾ ಪಡೆ ಹರಿಯಾಣದಲ್ಲಿ ಪ್ರತಿಭಟನೆ ನಡೆಸಲು ಅವಕಾಶ ನೀಡಿರಲಿಲ್ಲ. ಶನಿವಾರ ನಡೆಯುವ ಪ್ರತಿಭಟನಾ ಮೆರವಣಿಗೆಯನ್ನು ತಡೆಯಲು ಹರಿಯಾಣ ಸರ್ಕಾರ ಅಂಬಾಲಾದ 12 ಹಳ್ಳಿಗಳಲ್ಲಿ ಡಿಸೆಂಬರ್ 17 ಮೊಬೈಲ್ ಇಂಟರ್‌ನೆಟ್‌ ಮತ್ತು ಬೃಹತ್ SMS ಸೇವೆಗಳನ್ನು ಸ್ಥಗಿತಗೊಳಿಸಿದೆ.

ಎಂಎಸ್‌ಪಿಗೆ ಕಾನೂನಾತ್ಮಕ ಖಾತರಿ, ಕೃಷಿ ಸಾಲ ಮನ್ನಾ, ರೈತರಿಗೆ ಪಿಂಚಣಿ, ವಿದ್ಯುತ್ ದರ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. 2013ರ ಭೂ ಸ್ವಾಧೀನ ಕಾಯಿದೆಯನ್ನು ಮರುಸ್ಥಾಪಿಸುವುದರ ಜೊತೆಗೆ 2021ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಮತ್ತು ರೈತರ ವಿರುದ್ಧದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ : Kho Kho World Cup : ಜನವರಿ 13ರಿಂದ ನವದೆಹಲಿಯಲ್ಲಿ ನಡೆಯಲಿದೆ ಮೊದಲ ಖೋ ಖೋ ವಿಶ್ವಕಪ್; ವಿವರ ಇಲ್ಲಿದೆ