Friday, 13th December 2024

ನಾಗಾಲ್ಯಾಂಡ್‍ನಿಂದ ಸಂಸತ್ತಿಗೆ ಮಹಿಳಾ ಸದಸ್ಯೆ

ಕೋಹಿಮಾ: ನಲುವತ್ತೈದು ವರ್ಷದ ಬಳಿಕ ಮತ್ತೆ ಮಹಿಳಾ ಸದಸ್ಯೆ ಸಂಸತ್ತಿಗೆ ಚುನಾಯಿತರಾಗಲಿದ್ದಾರೆ.

ಬಿಜೆಪಿ ಅಭ್ಯರ್ಥಿ ಎಸ್.ಪಾಂಗ್‍ನಾನ್ ಕೊನ್ಯಾಕ್ (44) ಅವರು ರಾಜ್ಯದಿಂದ ರಾಜ್ಯಸಭೆ ಯ ಏಕೈಕ ಸ್ಥಾನಕ್ಕೆ ಈ ತಿಂಗಳ 31ರಂದು ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾಗಿರುತ್ತಾರೆ. 1977ರಲ್ಲಿ ರಾನೊ ಎಂ ಶಾಯಿಝಾ ನಾಗಾಲ್ಯಾಂಡ್‍ನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ನಾಲ್ಕು ದಶಕಗಳ ಬಳಿಕ ಕೊನ್ಯಾಕ್ ಅವರ ಹೆಸರು ನಾಲ್ಕು ರಾಜ್ಯ ಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿದೆ.

ಬಿಜೆಪಿ ಆಡಳಿತಾರೂಢ ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರಸ್ಸಿವ್ ಪಾರ್ಟಿಯ ಹಿರಿಯ ಪಾಲುದಾರ ಪಕ್ಷವಾಗಿದ್ದು, ಕೊನ್ಯಾಕ್ ಅವರ ವಿಜಯ ಬಹುತೇಕ ನಿಶ್ಚಿತ. ಈ ಬೆಳವಣಿಗೆ ನಾಗಾಲ್ಯಾಂಡ್ ಪಾಲಿಗೆ ಮಹತ್ವದ್ದಾಗಿದ್ದು, ರಾಜ್ಯದ ಸ್ಥಾನಮಾನ ದೊರಕಿ 58 ವರ್ಷ ಕಳೆದರೂ ಇದುವರೆಗೆ ರಾಜ್ಯ ವಿಧಾನಸಭೆಗೆ ಯಾವ ಮಹಿಳೆಯೂ ಆಯ್ಕೆಯಾಗಿಲ್ಲ ಎನ್ನುವುದು ಗಮನಾರ್ಹ.

ಬಿಜೆಪಿ ಅಭ್ಯರ್ಥಿ ಕೊನ್ಯಾಕ್ ಬುಡಕಟ್ಟಿಗೆ ಸೇರಿರುವುದರಿಂದ, ಈ ಸಮುದಾಯವನ್ನು ಓಲೈಸುವ ಕ್ರಮ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕೊನ್ಯಾಕ್ ಅವರು ರಾಜ್ಯ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷರಾಗಿದ್ದು, ತಮ್ಮ ಸ್ವ ಸಾಮರ್ಥ್ಯದಿಂದ ಟಿಕೆಟ್‍ಗೆ ಅರ್ಹ ಅಭ್ಯರ್ಥಿ ಎಂದು ರಿಯೊ ಬಣ್ಣಿಸಿದ್ದಾರೆ.