Wednesday, 11th December 2024

’ಪ್ರತಿಭಟನೆ’ಗೆ ಪ್ರಚೋದಿಸುವ ಟ್ವೀಟ್‌: ಗ್ರೇಟಾ ವಿರುದ್ಧ ಎಫ್​ಐಆರ್ ದಾಖಲು

ನವದೆಹಲಿ: ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸುವ ಹೆಸರಿನಲ್ಲಿ, ವಿಶ್ವಮಟ್ಟದಲ್ಲಿ ಭಾರತಕ್ಕೆ ಹೇಗೆ ಮಸಿ ಬಳಿಯಬಹುದು ಎಂಬ ಟ್ವೀಟ್​ ಮಾಡಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿರುವ ಪರಿಸರ ಹೋರಾಟಗಾರ್ತಿ ಪ್ರಸಿದ್ಧಿಯ ಗ್ರೇಟಾ ಥನ್​ಬರ್ಗ್ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ.

ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ರೈತರು ಹೇಗೆ ಪ್ರತಿಭಟನೆ ನಡೆಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇರುವ ರಹಸ್ಯ ಗೂಗಲ್‌ ಡಾಕ್ಯು ಮೆಂಟ್‌ ಟ್ವೀಟ್‌ ಮಾಡಿದ್ದಳು. ನಂತರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಡಿಲೀಟ್‌ ಮಾಡಿದ್ದಾಳೆ. ಪೋಸ್ಟ್​ನ​ ಸ್ಕ್ರೀನ್​ಷಾಟ್​ ದಾಖಲೆ ರೂಪದಲ್ಲಿ ಸಿಕ್ಕಿದೆ.

ಯಾವ್ಯಾವ ರೀತಿಯಲ್ಲಿ ಪ್ರತಿಭಟನೆ ಮಾಡಬೇಕು ಎಂದು ಪ್ರಚೋದನೆ ನೀಡುವ ದಾಖಲೆಗಳನ್ನು ಗ್ರೇಟಾ ಟ್ವೀಟ್​ ಮಾಡಿದ್ದಳು. ಟ್ವೀಟ್​ ಮಾಡಿರುವುದು ಯಾರನ್ನು ಓಲೈಸಲು ಹಾಗೂ ನಂತರ ಹೆದರಿ ಟ್ವೀಟ್​ ಡಿಲೀಟ್​ ಮಾಡಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆ ಬರುವ ನಿಟ್ಟಿನಲ್ಲಿ ಈಕೆ ಮಾಡಿರುವ ಟ್ವೀಟ್​ನಿಂದಾಗಿ, ಸಾಮರಸ್ಯ ಕದಡಲು ಷಡ್ಯಂತ್ರ ರಚಿಸಿರುವ ಆರೋಪದ ಮೇಲೆ ಎಫ್​ಐಆರ್​ ದಾಖಲಾಗಿದೆ.