Wednesday, 11th December 2024

ಉಚಿತ ಕೋವಿಡ್‌ ಲಸಿಕೆ ಭರವಸೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಲ್ಲ: ಚು.ಆಯೋಗ

ನವದೆಹಲಿ: ಕೋವಿಡ್‌ ಲಸಿಕೆಯನ್ನು ಬಿಹಾರದ ಜನರಿಗೆ ಉಚಿತವಾಗಿ ನೀಡುವುದಾಗಿ ಬಿಜೆಪಿ ನೀಡಿದ್ದ ಭರವಸೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ’ ಎಂದು ಕೇಂದ್ರ ಚುನಾವಣಾ ಆಯೋಗ ಶನಿವಾರ ಸ್ಪಷ್ಟಪಡಿಸಿದೆ.

ಬಿಜೆಪಿ ಭರವಸೆಯನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಸಾಕೇತ್‌ ಗೋಖಲೆ ಅವರು ಆಯೋಗಕ್ಕೆ ದೂರು ನೀಡಿದ್ದರು.

ಬಿಜೆಪಿಯ ಭರವಸೆ ತಾರತಮ್ಯದಿಂದ ಕೂಡಿದ್ದು, ಚುನಾವಣೆಯ ವೇಳೆ ಕೇಂದ್ರ ಸರ್ಕಾರದ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

‘ನಿಗದಿತ ಚುನಾವಣೆಯ ವೇಳೆ ಮತದಾರರನ್ನು ಓಲೈಸುವುದಕ್ಕಾಗಿ ಎಲ್ಲಾ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುವುದು ಸಾಮಾನ್ಯ. ಬಿಜೆಪಿಯ ಭರವಸೆಯು ಮಾದರಿ ನೀತಿ ಸಂಹಿತೆಗೆ ವಿರುದ್ಧವಾಗಿಲ್ಲ’ ಎಂದು ಆಯೋಗ ಹೇಳಿದೆ.

ಈ ತಿಂಗಳ ಆರಂಭದಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌, ಐಸಿಎಂಆರ್‌ ಒಪ್ಪಿಗೆ ದೊರೆತ ಕೂಡಲೇ ಬಿಹಾರದ ಜನತೆಗೆ ಕೋವಿಡ್‌ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದ್ದರು.