Wednesday, 11th December 2024

ದೇಶಾದ್ಯಂತ ಉಚಿತ ಕೊರೋನಾ ಲಸಿಕೆ ವಿತರಣೆ: ಸಚಿವ ಹರ್ಷವರ್ಧನ್

ನವದೆಹಲಿ: ದೇಶದಾದ್ಯಂತ ಉಚಿತವಾಗಿ ಕೋವಿಡ್-19 ಲಸಿಕೆಯನ್ನು ವಿತರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಲಸಿಕೆ ನೀಡುವ ಪ್ರಕ್ರಿಯೆಯ ಅಣಕು ಕಾರ್ಯಾಚರಣೆಗೆ ದೆಹಲಿಯಲ್ಲಿ ಸಿದ್ಧತೆ ಪರಿಶೀಲಿಸಿದ ಬಳಿಕ ಈ ವಿಷಯ ಅರುಹಿದ್ದಾರೆ.

‘ದೆಹಲಿ ಮಾತ್ರವಲ್ಲ. ಲಸಿಕೆ ಇಡೀ ದೇಶದಲ್ಲಿ ಉಚಿತವಾಗಿ ವಿತರಿಸಲಾಗುವುದು’ ಎಂದು ಹೇಳಿದ್ದಾರೆ. ಕೋವಿಡ್‌-19 ಲಸಿಕೆ ಯನ್ನು ಉಚಿತವಾಗಿ ವಿತರಿಸಲಾಗುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.

‘ಮೊದಲ ಹಂತದಲ್ಲಿ 1 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಕರ್ತವ್ಯದಲ್ಲಿ ಮುಂಚೂಣಿಯಲ್ಲಿರುವ 2 ಕೋಟಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. 27 ಕೋಟಿ ಆದ್ಯತೆಯ ಫಲಾನುಭವಿಗಳಿಗೆ ಜುಲೈ ಒಳಗಾಗಿ ಹೇಗೆ ಲಸಿಕೆ ವಿತರಣೆ ಮಾಡಬೇಕು ಎಂಬ ಬಗ್ಗೆ ಯೋಜನೆ ಅಂತಿಮಗೊಳಿಸಲಾಗುವುದು’ ಎಂದು ಸಚಿವರು ತಿಳಿಸಿದ್ದಾರೆ.

ಲಸಿಕೆ ವಿತರಣೆಗೆ ಸಿದ್ಧತೆ ನಿಟ್ಟಿನಲ್ಲಿ ಶನಿವಾರ ದೇಶದಾದ್ಯಂತ ಲಸಿಕೆ ನೀಡಿಕೆ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ದೆಹಲಿ ಯಲ್ಲಿ ಕೋವಿಡ್ ಲಸಿಕೆಯ ಪೂರ್ವಾಭ್ಯಾಸವನ್ನು (ಡ್ರೈ ರನ್‌) ಆರಂಭಿಸಲಾಗಿದೆ.