Wednesday, 11th December 2024

ಅಪಾಯದ ಮಟ್ಟ ಮೀರಿದ ಗಂಗಾ ನದಿ: 76 ಶಾಲೆಗಳಿಗೆ ಆ.31ರ ವರೆಗೆ ರಜೆ

ಟ್ನಾ: ಭಾರಿ ಮಳೆಯಿಂದಾಗಿ ಗಂಗಾ ನದಿ ನೀರಿನ ಪ್ರಮಾಣ ಅಪಾಯದ ಮಟ್ಟವನ್ನು ಮೀರಿದೆ. ಈ ಹಿನ್ನೆಲೆಯಲ್ಲಿ ಪಟ್ನಾ ಜಿಲ್ಲಾಡಳಿತ, ಗ್ರಾಮೀಣ ಪ್ರದೇಶದ 76 ಶಾಲೆಗಳಿಗೆ ಆ.31ರ ವರೆಗೆ ರಜೆ ಘೋಷಿಸಿದೆ.

ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಪಟ್ನಾ ಜಿಲ್ಲಾಧಿಕಾರಿ ಚಂದ್ರಶೇಖರ್‌ ಸಿಂಗ್ ಅವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

‘ಗಂಗಾ ನದಿ ನೀರಿನ ಪ್ರಮಾಣ ಏರಿಕೆಯಾಗುತ್ತಿರುವುದನ್ನು ಪರಿಗಣಿಸಿ, ಪಟ್ನಾ ಜಿಲ್ಲೆಯ ಎಂಟು ವಿಭಾಗಗಳ 76 ಸರ್ಕಾರಿ ಶಾಲೆಗಳನ್ನು ಆ.31ರ ವರಗೆ ಮುಚ್ಚಲಾಗುವುದು’ ಎಂದಿದ್ದಾರೆ. ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಗಂಗಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋದ ಪ್ರಕರಣ ವರದಿಯಾದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.

ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾದರೆ ಶಾಲೆಗಳಿಗೆ ರಜೆ ನೀಡುವುದೂ ಸೇರಿದಂತೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಬಿಹಾರ ಸರ್ಕಾರ ನಿರ್ದೇಶನ ನೀಡಿದೆ.