Wednesday, 11th December 2024

ಮೇ 31ರವರೆಗೆ ಗಂಗೋತ್ರಿಯಲ್ಲಿ ವಿಐಪಿ ದರ್ಶನಕ್ಕೆ ಅವಕಾಶವಿಲ್ಲ: ಉತ್ತರಾಖಂಡ ಸರ್ಕಾರ

ಡೆಹ್ರಾಡೂನ್: ದೇವಾಲಯಗಳಲ್ಲಿ ನೂಕುನುಗ್ಗಲು ಇರುವ ಕಾರಣ ಚಾರ್‌ಧಾಮ್‌ಗಳಾದ ಕೇದಾರನಾಥ, ಯಮುನೋತ್ರಿ, ಬದರಿನಾಥ ಮತ್ತು ಗಂಗೋತ್ರಿಯಲ್ಲಿ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ.

‘ಮೇ 31ರವರೆಗೆ ಚಾರ್‌ಧಾಮ್‌ಗಳಲ್ಲಿ ವಿಐಪಿ ದರ್ಶನಕ್ಕೆ ಅವಕಾಶವಿಲ್ಲ. ದೇವಾಲಯಗಳ 50 ಮೀಟರ್ ವ್ಯಾಪ್ತಿಯಲ್ಲಿ ವಿಡಿಯೊಗ್ರಫಿ ಮತ್ತು ರೀಲ್ಸ್‌ ಮಾಡುವುದರ ಮೇಲೆ ನಿಷೇಧ ಹೇರಲಾಗಿದೆ’ ಎಂದು ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ತಿಳಿಸಿದ್ದಾರೆ. ಅಲ್ಲದೇ ‌ಮೇ 19ರವರೆಗೆ ಹರಿದ್ವಾರ ಮತ್ತು ಋಷಿಕೇಶದಲ್ಲಿ ಆಫ್‌ಲೈನ್ ನೋಂದಣಿಗೆ ಅವಕಾಶವಿಲ್ಲ ಎಂದೂ ಹೇಳಿದ್ದಾರೆ.

ಕೆಲವು ಯಾತ್ರಾರ್ಥಿಗಳು ದೇವಾಲಯಗಳ ಆವರಣದಲ್ಲಿ ವಿಡಿಯೊಗ್ರಫಿ ಮತ್ತು ರೀಲ್ಸ್‌ಗಳನ್ನು ಮಾಡುತ್ತಿದ್ದರು. ಇದರಿಂದಾಗಿ ಜನರು ಒಂದೇ ಸ್ಥಳದಲ್ಲಿ ಸೇರಿ ಅನಾನುಕೂಲತೆ ಉಂಟಾಗುತ್ತದೆ ಎಂದು ರಾತುರಿ ಹೇಳಿದ್ದಾರೆ.

ಮೇ 10ರಿಂದ ಚಾರ್‌ಧಾಮ್ ಯಾತ್ರೆ ಪ್ರಾರಂಭವಾಗಿದೆ. ಯಾತ್ರೆ ಆರಂಭವಾದ ಆರು ದಿನಗಳಲ್ಲಿ ಭಾರತ ಮತ್ತು ವಿದೇಶಗಳಿಂದ ಸುಮಾರು 3,34,732 ಜನರು ದೇಗುಲಗಳಿಗೆ ಭೇಟಿ ನೀಡಿದ್ದಾರೆ.

ಏಪ್ರಿಲ್ 25ರಿಂದ ಯಾತ್ರೆಗೆ ನೋಂದಣಿ ಆರಂಭವಾಗಿದ್ದು, ಮೇ 16 ಸಂಜೆಯವರೆಗೆ 27 ಲಕ್ಷಕ್ಕೂ ಹೆಚ್ಚು ಭಕ್ತರು ನೋಂದಣಿ ಮಾಡಿಕೊಂಡಿದ್ದಾರೆ.

ಏಪ್ರಿಲ್ 30ರಂದು ಇತರ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಮೇ 25 ರವರೆಗೆ ದೇವಾಲಯಗಳಲ್ಲಿ ವಿಐಪಿ ದರ್ಶನಕ್ಕೆ ಅವಕಾಶ ವಿಲ್ಲ ಎಂದು ಹೇಳಲಾಗಿತ್ತು. ಈಗ ದಿನಾಂಕ ವಿಸ್ತರಣೆಯಾಗಿದೆ.