Wednesday, 11th December 2024

5.58 ಕೋಟಿ ರೂ. ಮೌಲ್ಯದ 37.23 ಕ್ವಿಂಟಾಲ್‌ ಗಸಗಸೆ ವಶ

ಚೈಬಾಸಾ: ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್‌ ಜಿಲ್ಲೆಯಲ್ಲಿ ಪೊಲೀಸರು 5.58 ಕೋಟಿ ರೂಪಾಯಿ ಮೌಲ್ಯದ 37.23 ಕ್ವಿಂಟಾಲ್‌ ಗಸಗಸೆಯನ್ನು ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ಸಿಂಗ್‌ಭೂಮ್‌ ಜಿಲ್ಲೆಯ ಚಕ್ರಧರಪುರದಿಂದ ಚೈಬಾಸಾಗೆ ಗಸಗಸೆ ತುಂಬಿದ ಟ್ರಕ್‌ ಬರುತ್ತಿದೆ ಎಂಬ ಸುಳಿವಿನ ಮೇರೆಗೆ ಪೊಲೀಸ್‌‍ ಅಧೀಕ್ಷಕ ಅಶುತೋಷ್‌ ಶೇಖರ್‌ ನೇತೃತ್ವದ ತಂಡ ಈ ದಾಳಿ ನಡೆಸಿದೆ.

ಲಾರಿ ತಪಾಸಣೆಯ ವೇಳೆ ಚಾಲಕ ಮತ್ತು ಅವರ ಸಹಾಯಕ ಪೊಲೀಸ್‌‍ ತಂಡವನ್ನು ನೋಡಿ ಮಫಸಿಲ್‌ ಪೊಲೀಸ್‌‍ ಠಾಣೆಯ ಚೆಕ್‌ ಪೋಸ್ಟ್‌ ಬಳಿ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ಅವರನ್ನು ಹಿಡಿಯಲು ಪೊಲೀಸ್‌‍ ತಂಡ ಹರಸಾಹಸ ಮಾಡಿದರೂ ಅದು ಸಾಧ್ಯವಾಗಲಿಲ್ಲ.

ವಾಹನ ತಪಾಸಣೆ ನಡೆಸಿದ ಪೊಲೀಸರು 186 ಮೂಟೆಗಳಲ್ಲಿ ತುಂಬಿದ್ದ 3,723 ಕೆಜಿ ಗಸಗಸೆ ಮತ್ತು 40 ಮೂಟೆ ಮೂರಿ (ಪಫ್‌್ಡರೈಸ್‌‍) ಜೊತೆಗೆ ಎರಡು ಮೊಬೈಲ್‌ ಫೋನ್ಗಳು, ಎರಡು ಆಧಾರ್‌ ಕಾರ್ಡ್‌ಗಳು ಮತ್ತು ಚಾಲನಾ ಪರವಾನಗಿಯನ್ನು ವಶಪಡಿಸಿಕೊಳ್ಳಲಾಗಿದೆ.

ಎನ್‌ಡಿಪಿಎಸ್‌‍ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿಷಿದ್ಧ ವಸ್ತುವಿನ ಬೆಲೆ 5.58 ಕೋಟಿ ರೂಪಾಯಿ ಎಂದು ಎಸ್ಪಿ ತಿಳಿಸಿದ್ದಾರೆ