Sunday, 3rd November 2024

ಲೈಂಗಿಕ ದೌರ್ಜನ್ಯ ಆರೋಪ: ಗೋವಾ ಸಚಿವರ ರಾಜೀನಾಮೆ

Milind Naik

ಪಣಜಿ: ಗೋವಾ ಸಚಿವ ಮಿಲಿಂದ್ ನಾಯ್ಕ್ ರಾಜೀನಾಮೆ ನೀಡಿದ್ದಾರೆ. ಗೋವಾ ನಗರಾಭಿವೃದ್ಧಿ ಸಚಿವ ಮತ್ತು ಬಿಜೆಪಿ ಶಾಸಕ ಮಿಲಿಂದ್​ ನಾಯ್ಕ್​ ವಿರುದ್ಧ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿತ್ತು.

ಸಚಿವ ಮಿಲಿಂದ್​ ನಾಯ್ಕ್​ ಮತ್ತು ಸಂತ್ರಸ್ತ ಮಹಿಳೆಯ ನಡುವೆ ಕೆಲ ದಿನಗಳ ಹಿಂದೆ ನಡೆದ ಆಡಿಯೋ ಸಂಭಾಷಣೆ ಬಹಿರಂಗವಾಗಿ ಗೋವಾ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾರಣಕ್ಕಾಗಿ ಸಚಿವರು ರಾಜೀನಾಮೆ ಸಲ್ಲಿಸಬೇಕು ಕಾಂಗ್ರೆಸ್​ ಪಟ್ಟು ಹಿಡಿದಿತ್ತು.

ತನಿಖೆ ನಡೆಸಬೇಕು ಮತ್ತು ಸಚಿವರು ರಾಜೀನಾಮೆ ಸಲ್ಲಿಸಬೇಕು ಎಂದು ಕಾಂಗ್ರೆಸ್​ ನಾಯಕರು ಒತ್ತಾಯಿಸಿ 15 ದಿನಗಳ ಗಡುವು ನೀಡಿದ್ದರು.

ಮುಕ್ತ ಮತ್ತು ನ್ಯಾಯಯುತ ತನಿಖೆಯನ್ನು ನಡೆಸುವ ಸಲುವಾಗಿ ಮಿಲಿಂದ್ ನಾಯ್ಕ್‌ ಗೋವಾ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಒಂದು ದಿನದ ಹಿಂದೆ ಗೋವಾ ಕಾಂಗ್ರೆಸ್‌ನ ಮುಖ್ಯಸ್ಥ ಗಿರೀಶ್ ಚೋಡಂಕರ್ ಅವರು ನಾಯ್ಕ್ ಅವರು ಕ್ಯಾಬಿನೆಟ್ ಸದಸ್ಯರಾಗಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಮಹಿಳೆಯ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಆರೋಪಿಸಿದರು.