Wednesday, 11th December 2024

ಸರ್ಕಾರಿ ಕಚೇರಿಗಳಲ್ಲಿ ಚೈನೀಸ್​ ಸಿಸಿಟಿವಿ ಕ್ಯಾಮೆರಾ ನಿಷೇಧಿಸಿ: ಪ್ರಧಾನಿಗೆ ಪತ್ರ

ನವದೆಹಲಿ: ಚೈನೀಸ್​ ಸಿಸಿಟಿವಿ ಕ್ಯಾಮೆರಾಗಳನ್ನು ಭಾರತದಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ನಿಷೇಧಿಸುವಂತೆ ಅರುಣಾಚಲ ಕಾಂಗ್ರೆಸ್​ ಶಾಸಕ ನಿನೊಂಗ್ ಎರಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಪಾಸಿಘಾಟ್​ ಪಶ್ಚಿಮದ ಶಾಸಕರು, ಮಾಜಿ ಕೇಂದ್ರ ಸಚಿವರೂ ಆಗಿರುವ ನಿನೊಂಗ್ ಎರಿಂಗ್ ಅವರು ತಾವು ಪ್ರಧಾನಿಗೆ ಬರೆದ ಪತ್ರವನ್ನು ಟ್ವಿಟರ್​​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

‘ನಮ್ಮ ದೇಶದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಚೀನಾ ನಿರ್ಮಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದನ್ನು ನಿಷೇಧಿಸಬೇಕು. ಚೀನಾದ ಸಿಸಿಟಿವಿ ಕ್ಯಾಮೆರಾಗಳು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರಬಲ್ಲವು ಎಂದು ಪತ್ರದಲ್ಲಿ ಬರೆದಿದ್ದಾರೆ.

ನಮ್ಮ ಹಲವು ವೆಬ್​ಸೈಟ್​ಗಳನ್ನೆಲ್ಲ ಹ್ಯಾಕ್​ ಮಾಡಿ, ಮಾಹಿತಿ ಕದಿಯುವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಅದರ ಸಿಸಿಟಿವಿ ಕ್ಯಾಮೆರಾಗಳನ್ನು ನಂಬುವುದು ಕಷ್ಟವೇ ಆಗಿದೆ. ಚೀನಾ ಒಡ್ಡುತ್ತಿರುವ ಇಂಥ ಅಪಾಯವನ್ನು ತಡೆಗ ಟ್ಟಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಚೀನಾದ ಸಿಸಿಟಿವಿ ನೆಟ್ವರ್ಕ್​​ನಲ್ಲಿ ಬಳಸುವ ಇಂಟರ್​ನೆಟ್​ ಪ್ರೊಟೊಕಾಲ್​ (ಐಪಿ) ಕ್ಯಾಮೆರಾಗಳು ಮತ್ತು ಇಂಟರ್​ನೆಟ್​ ಚಾಲಿತ ಡಿಜಿಟಲ್​ ವಿಡಿಯೊ ರೆಕಾರ್ಡಿಂಗ್​ ಉಪಕರಣಗಳು ಚೈನೀಸ್​ ಹ್ಯಾಕರ್​ ಜತೆಗೆ ರಾಜಿ ಒಪ್ಪಂದ ಮಾಡಿಕೊಂಡು, ಹೇಗೆಲ್ಲ ಪ್ರಮುಖ ಮಾಹಿತಿ ಕದಿಯುತ್ತಿದ್ದಾರೆ ಎಂಬುದನ್ನೂ ಕಾಂಗ್ರೆಸ್ ಶಾಸಕ ಹೇಳಿದ್ದಾರೆ.

ಭಾರತದಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಸುಮಾರು 20 ಲಕ್ಷ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.