Monday, 16th September 2024

GST collection: ಜಿಎಸ್‌ಟಿ ಸಂಗ್ರಹದಲ್ಲಿ 10% ಏರಿಕೆ, ಕರ್ನಾಟಕಕ್ಕೆ ದ್ವಿತೀಯ ಸ್ಥಾನ

GST collection

ಹೊಸ ದಿಲ್ಲಿ : ಕಳೆದ ಆಗಸ್ಟ್‌ನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ (GST collection) ಶೇ.10 ಹೆಚ್ಚಳವಾಗಿದ್ದು, 1.74 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 2023ರ ಆಗಸ್ಟ್‌ನಲ್ಲಿ 1,59,069 ಕೋಟಿ ರೂ. ಸಂಗ್ರಹವಾಗಿತ್ತು. ಹಣಕಾಸು ಸಚಿವಾಲಯವು ಈ ಕುರಿತ ಅಂಕಿ ಅಂಶಗಳನ್ನು ಬಿಡುಗಡೆಗೊಳಿಸಿದೆ.

ರಾಜ್ಯವಾರು ಲೆಕ್ಕದಲ್ಲಿ ಮಹಾರಾಷ್ಟ್ರದಲ್ಲಿ 26,367 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ 12,344 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿದ್ದು, ಎರಡನೇ ಸ್ಥಾನದಲ್ಲಿದೆ. ಗುಜರಾತ್‌ನಲ್ಲಿ 10,344 ಕೋಟಿ ರೂ. ಸಂಗ್ರಹವಾಗಿದ್ದು, ಮೂರನೇ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 10,181 ಕೋಟಿ ರೂ, ಹರಿಯಾಣದಲ್ಲಿ 8,623 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ.

ಪ್ರತಿ ತಿಂಗಳ ಮೊದಲ ದಿನದಂದು ಸಾಮಾನ್ಯವಾಗಿ ಸರ್ಕಾರವು ಜಿಎಸ್‌ಟಿ ಸಂಗ್ರಹ ಕುರಿತ ಮಾಹಿತಿಯನ್ನು ಬಿಡುಗಡೆಗೊಳಿಸುತ್ತದೆ. ಕಳೆದ 74 ತಿಂಗಳುಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ಜುಲೈನಲ್ಲಿ 1.82 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಅಂದರೆ 10.3% ಏರಿಕೆಯಾಗಿತ್ತು. 2023ರ ಜುಲೈನಲ್ಲಿ 1.65 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಹೀಗಿದ್ದರೂ 2023ರ ಜುಲೈಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಇಳಿಕೆಯಾಗಿದೆ.

ಕರ್ನಾಟಕ ಜಿಎಸ್‌ಟಿ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿರುವುದರಿಂದ ಕೇಂದ್ರೀಯ ತೆರಿಗೆ ಹಂಚಿಕೆಯಲ್ಲಿ ಹೆಚ್ಚಿನ ಪಾಲು ನೀಡಬೇಕು ಎಂಬ ಬೇಡಿಕೆಯನ್ನು ಪ್ರತಿಪಕ್ಷಗಳು ಮಾಡುತ್ತಿವೆ. ಕೇಂದ್ರ ಸರ್ಕಾರ ಜಿಎಸ್‌ಟಿ ಸಂಗ್ರಹ ಮಾಡುತ್ತಿರುವುದರಿಂದ ರಾಜ್ಯಕ್ಕೆ ಹೆಚ್ಚಿನ ತೆರಿಗೆ ಸಂಗ್ರಹಕ್ಕೆ ಆಸ್ಪದ ಇಲ್ಲದಂತಾಗಿದೆ. ಹೀಗಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿತ್ತು ಎಂದು ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ಆರೋಪಿಸಿದ್ದರು.

ದೇಶದಲ್ಲಿ ಜಿಎಸ್‌ಟಿ ಸಂಗ್ರಹ ಹೆಚ್ಚಳವಾಗಿರುವುದು ಆರ್ಥಿಕ ಬೆಳವಣಿಗೆಯನ್ನು ಬಿಂಬಿಸುತ್ತಿದೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ. ಈ ನಡುವೆ ಜಿಎಸ್‌ಟಿ ರಿಫಂಡ್‌ 19.4% ಇಳಿಕೆಯಾಗಿದ್ದು, 16,283 ಕೋಟಿ ರೂ.ಗೆ ತಗ್ಗಿದೆ. ಜಿಎಸ್‌ಟಿ ಪದ್ಧತಿಯಲ್ಲಿ ಮುಖ್ಯವಾಗಿ 0%, 5%, 12%, 18% ಮತ್ತು 28% ಎಂಬ ತೆರಿಗೆ ದರದ ಶ್ರೇಣಿಗಳು ಇವೆ. ಹೀಗಿದ್ದರೂ, ಪೆಟ್ರೋಲಿಯಂ ಉತ್ಪನ್ನಗಳು, ಆಲ್ಕೊಹಾಲ್‌, ವಿದ್ಯುತ್‌ ಜಿಎಸ್‌ಟಿ ವ್ಯಾಪ್ತಿಯಲ್ಲಿ ಸದ್ಯಕ್ಕೆ ಸೇರ್ಪಡೆಯಾಗಿಲ್ಲ.

2017ರ ಜುಲೈ 1ರಂದು ಜಿಎಸ್‌ಟಿ ಜಾರಿಯಾಗಿತ್ತು. 2024-25ರ ಮೊದಲ ಐದು ತಿಂಗಳುಗಳಲ್ಲಿ ಜಿಎಸ್‌ಟಿ ಕಂದಾಯ 10.1% ಏರಿಕೆಯಾಗಿತ್ತು. 9.14 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಜಿಎಸ್‌ಟಿ ಸಂಗ್ರಹ ಹೆಚ್ಚುತ್ತಿರುವುದರಿಂದ ಅಸಂಘಟಿತ ವಲಯದ ಹೆಚ್ಚೆಚ್ಚು ಬಿಸಿನೆಸ್‌ಗಳು ಸಂಘಟಿತ ವಲಯಕ್ಕೆ ಬರಲು ಸಹಕಾರಿಯಾಗುತ್ತದೆ. ತೆರಿಗೆ ಪದ್ಧತಿಯಲ್ಲಿ ಪಾರದರ್ಶಕತೆ ಹೆಚ್ಚುತ್ತದೆ. ತೆರಿಗೆ ಸೋರಿಕೆಯನ್ನು ತಡೆಯಲು ಕೂಡ ಇದು ಉಪಯುಕ್ತ.

ಎಲ್‌ಐಸಿಗೆ ಜಿಎಸ್‌ಟಿ ನೋಟಿಸ್

ಭಾರತೀಯ ಜೀವ ವಿಮಾ ನಿಗಮಕ್ಕೆ 605 ಕೋಟಿ ರೂ.ಗಳ ಜಿಎಸ್‌ಟಿ ಬೇಡಿಕೆ ಕುರಿತ ನೋಟಿಸ್‌ ಅನ್ನು ಜಾರಿಗೊಳಿಸಲಾಗಿದೆ. 294 ಕೋಟಿ ರೂ. ಜಿಎಸ್‌ಟಿ, 281 ಕೋಟಿ ರೂ. ಬಡ್ಡಿ ಮತ್ತು 29 ಕೋಟಿ ರೂ.ಗಳ ದಂಡವನ್ನು ವಿಧಿಸಲಾಗಿದೆ. ಎಲ್‌ಐಸಿಯು ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ 3,662 ಕೋಟಿ ರೂ.ಗಳ ಡಿವಿಡೆಂಡ್‌ ಚೆಕ್‌ ಅನ್ನು ಹಸ್ತಾಂತರಿಸಿದೆ.

Leave a Reply

Your email address will not be published. Required fields are marked *