Wednesday, 11th December 2024

ಗುಜರಾತ್‌ ಉಪಚುನಾವಣೆ: ಏಳು ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿಜೆಪಿ ಮುನ್ನಡೆ

ಗಾಂಧಿನಗರ: ಗುಜರಾತ್‌ನ ಏಳು ಕ್ಷೇತ್ರಗಳಲ್ಲಿ ಆಡಳಿತಾ ರೂಢ ಬಿಜೆಪಿಯ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಒಂದು ಸ್ಥಾನದಲ್ಲಿ ಕಾಂಗ್ರೆಸ್‌ ಮುಂದಿದೆ.

ಆಯೋಗದ ಮಾಹಿತಿಯ ಪ್ರಕಾರ ಬಿಜೆಪಿ ಶೇ 53.13 ರಷ್ಟು ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಶೇ 35.1 ರಷ್ಟು ಮತಗಳನ್ನು ತನ್ನದಾಗಿಸಿಕೊಂಡಿದೆ.

ಮೊರ್ಬಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜಯಂತಿಲಾಲ್‌ ಪಟೇಲ್‌ 1500 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಗುಜರಾತ್‌ನ ಎಂಟು ವಿಧಾನಸಭಾ ಸ್ಥಾನಗಳಿಗೆ ನ.3 ರಂದು ಮತದಾನ ನಡೆದಿತ್ತು. ಜೂನ್‌ ತಿಂಗಳಲ್ಲಿ ನಡೆದ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಿದ ಕಾರಣ ಇಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಐವರು ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಈ ಐವರು ಶಾಸಕರು ಗೆದ್ದಿದ್ದ ಕ್ಷೇತ್ರಗಳಲ್ಲೇ ಬಿಜೆಪಿ ಇವರನ್ನು ಮತ್ತೆ ಕಣಕ್ಕಿಳಿಸಿದೆ.

ಗುಜರಾತ್‌ನ ಎಂಟು ಕ್ಷೇತ್ರಗಳ ಉಪಚುನಾವಣೆ ಜೊತೆಗೆ ಮಧ್ಯ ಪ್ರದೇಶದ 28 ಮತ್ತು ಉತ್ತರ ಪ್ರದೇಶದ ಏಳು, ಜಾರ್ಖಂಡ್‌, ಕರ್ನಾಟಕ, ನಾಗಾಲ್ಯಾಂಡ್‌ ಮತ್ತು ಒಡಿಶಾದ ತಲಾ ಎರಡು ಮತ್ತು ಛತ್ತೀಸಗಡ, ಹರಿಯಾಣ ಹಾಗೂ ತೆಲಂಗಾಣದ ತಲಾ ಒಂದೊಂದು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿತ್ತು. ಬಿಹಾರದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆದಿತ್ತು.