Friday, 13th December 2024

Gukesh Dommaraju: ʼಚೆಸ್‌ ಚಾಂಪಿಯನ್ ಗುಕೇಶ್‌ ನಮ್ಮವನುʼ-ಪೈಪೋಟಿಗೆ ಬಿದ್ದಿರುವ ಎರಡು ರಾಜ್ಯದ ಮುಖ್ಯಮಂತ್ರಿಗಳು!

ಚೆನ್ನೈ:‌ ಗುಕೇಶ್ ದೊಮ್ಮರಾಜು(Gukesh Dommaraju) ಎಂಬ 18ರ ಹರೆಯದ ಯುವಕ ಇದೀಗ ವಿಶ್ವ ಚೆಸ್ ಚಾಂಪಿಯನ್(World Chess Champion). ಅವರು ತಮ್ಮ ಅಸಾಮಾನ್ಯ ಸಾಧನೆಯ ಮೂಲಕ ಭಾರತದ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ್ದಾರೆ. ಸಿಂಗಾಪುರದಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ ಟೂರ್ನಿಯ ಫೈನಲ್‌ ಸುತ್ತಿನಲ್ಲಿ ಚೀನಾದ ಡಿಂಗ್ ಲಿರಿನ್(Ding Liren) ಅವರನ್ನು ಸೋಲಿಸುವ ಮೂಲಕ ಗುಕೇಶ್‌ದಾಖಲೆ ಬರೆದಿದ್ದಾರೆ. ಈ ಹಿಂದೆ ಚೆಸ್ ದಂತಕತೆ ಗ್ಯಾರಿ ಕ್ಯಾಸ್ಪರೋವ್ ಮತ್ತು ಮ್ಯಾಗ್ನಸ್ ಕಾರ್ಲ್‌ಸನ್ ತಮ್ಮ 22ನೇ ವಿಶ್ವ ಪ್ರಶಸ್ತಿ ಗೆದ್ದಿದ್ದು ದಾಖಲೆಯಾಗಿತ್ತು. ಭಾರತದ ಗುಕೇಶ್ ಇದೀಗ ಆ ದಾಖಲೆಯನ್ನು ಮುರಿದ್ದಾರೆ. ವಿಶ್ವ ಚೆಸ್ ಕ್ಷೇತ್ರದಲ್ಲಿ ಭಾರತದ ಹೊಸ ತಾರೆಯಾಗಿ ಗುಕೇಶ್‌ ಹೊರಹೊಮ್ಮಿದ್ದಾರೆ.

ಗುಕೇಶ್‌ ದೊಮ್ಮರಾಜು ಅವರ ಸಾಧನೆಗೆ ಇಡೀ ದೇಶವೇ ಬೆರಗಾಗಿದೆ. ಉಚ್ಚ ಕಂಠದಲ್ಲಿ ಎಲ್ಲರೂ ಅವರನ್ನು ಹೊಗಳುತ್ತಿದ್ದಾರೆ. ಈ ನಡುವೆ ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌(M K Stalin) ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು(N Chandrababu Naidu) ಗುಕೇಶ್‌ ಅವರನ್ನು ಅಭಿನಂದಿಸಿದ್ದು,ತಮ್ಮ ಎಕ್ಸ್‌ ಖಾತೆಯಲ್ಲಿ ಖುಷಿಯಿಂದ ಶುಭಾಶಯಗಳನ್ನು ತಿಳಿಸಿದ್ದಾರೆ. ಸ್ಟಾಲಿನ್‌ ಅವರು”ನಮ್ಮ ತಮಿಳು ಹುಡುಗ ನಮ್ಮ ಹೆಮ್ಮೆ” ಎಂದು ಬರೆದಿದ್ದರೆ, ಇತ್ತ ಚಂದ್ರಬಾಬು ನಾಯ್ಡು “ಗುಕೇಶ್‌ ತೆಲುಗು ಹುಡುಗ. ಎಲ್ಲರಿಗೂ ಹೆಮ್ಮೆ ತಂದಿದ್ದಾನೆ” ಎಂದು ಬರೆದುಕೊಂಡಿದ್ದಾರೆ. ಗುಕೇಶ್‌ ಅವರ ಮೂಲ ಮತ್ತು ಭಾಷೆಯ ವಿಚಾರದಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು “ಗುಕೇಶ್‌ ನಮ್ಮವನು” ಎಂಬ ಪೈಪೋಟಿಗೆ ಬಿದ್ದಿದ್ದಾರೆ. ಮುಖ್ಯಮಂತ್ರಿಗಳ ಪೋಸ್ಟ್‌ ಈಗ ಎಲ್ಲೆಡೆ ಸಾಕಷ್ಟು ವೈರಲ್‌ ಆಗುತ್ತಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಗುರುವಾರ(ಡಿ.12) ಸಂಜೆ 7:25 ಕ್ಕೆ ತಮ್ಮ ಎಕ್ಸ್‌ ಖಾತೆಯಲ್ಲಿ ಗುಕೇಶ್‌ ಅವರು ಚಿನ್ನದ ಪದಕ ಪಡೆಯುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದು,”ಹದಿನೆಂಟನೇ ವಯಸ್ಸಿನಲ್ಲೇ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಕ್ಕಾಗಿ ಗುಕೇಶ್ ಅವರಿಗೆ ಅಭಿನಂದನೆಗಳು! ನಿಮ್ಮ ಅಸಾಮಾನ್ಯ ಸಾಧನೆಯು ಭಾರತದ ಶ್ರೀಮಂತ ಚೆಸ್ ಪರಂಪರೆಯನ್ನು ಮುಂದುವರಿಸಿದೆ. ಮತ್ತೊಬ್ಬ ವಿಶ್ವ ದರ್ಜೆಯ ಚಾಂಪಿಯನ್ ಅನ್ನು ಹುಟ್ಟುಹಾಕಲು ಮತ್ತು ಜಾಗತಿಕ ಚೆಸ್ ರಾಜಧಾನಿಯಾಗಿ ತನ್ನ ಸ್ಥಾನವನ್ನು ಮತ್ತೊಮ್ಮೆ ಸಾಬೀತುಮಾಡಲು ಚೆನ್ನೈಗೆ ಸಹಾಯ ಮಾಡುತ್ತದೆ. ತಮಿಳುನಾಡು ನಿಮ್ಮ ಬಗ್ಗೆ ಅತೀವವಾಗಿ ಹೆಮ್ಮೆಪಡುತ್ತದೆ” ಎಂದು ಬರೆದುಕೊಂಡಿದ್ದಾರೆ.

ಇನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು ಅವರು ಕೂಡ ಗುಕೇಶ್‌ ಸಾಧನೆಯನ್ನು ಹೊಗಳಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಶೇರ್‌ ಮಾಡಿದ್ದು,”ನಮ್ಮದೇ ತೆಲುಗು ಹುಡುಗ, ಭಾರತೀಯ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ಅವರು ಕೇವಲ 18 ನೇ ವಯಸ್ಸಿನಲ್ಲಿ ವಿಶ್ವದ ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಆಗುವ ಮೂಲಕ ಸಿಂಗಾಪುರದಲ್ಲಿ ಇತಿಹಾಸವನ್ನು ಬರೆದಿದ್ದಕ್ಕಾಗಿ ಹೃತ್ಪೂರ್ವಕ ಅಭಿನಂದನೆಗಳು! ಇಡೀ ರಾಷ್ಟ್ರವು ನಿಮ್ಮ ಅದ್ಭುತ ಸಾಧನೆಯನ್ನು ಹೊಗಳುತ್ತದೆ. ಮುಂಬರುವ ದಿನಗಳಲ್ಲಿ ನಿಮಗೆ ಇನ್ನೂ ಅನೇಕ ವಿಜಯಗಳು ಮತ್ತು ಪುರಸ್ಕಾರಗಳು ಲಭಿಸಲಿ ಎಂದು ಹಾರೈಸುತ್ತೇನೆ” ಎಂದು ಬರೆದಿದ್ದಾರೆ.

ಎರಡೂ ರಾಜ್ಯದ ಮುಖ್ಯಮಂತ್ರಿಗಳು ನಾನಾ? ನೀನಾ? ಎಂಬ ಪೈಪೋಟಿಗೆ ಬಿದ್ದಿದ್ದಾರೆ. ಮಾಹಿತಿಯ ಪ್ರಕಾರ ಗುಕೇಶ್‌ ಕುಟುಂಬದ ಮೂಲ ಆಂಧ್ರಪ್ರದೇಶವಾದರೂ,ಇವರು ಹುಟ್ಟಿ ಬೆಳೆದಿರುವುದೆಲ್ಲಾ ಚೆನ್ನೈನಲ್ಲಿ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿಗಳ ಪೈಪೋಟಿ ಪೋಸ್ಟ್‌ಗಳಿಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಭಾಷೆ, ನೆಲ ಯಾವುದೇ ಆಗಿರಲಿ; ಗುಕೇಶ್‌ ಭಾರತದವನು. ಅಂದರೆ ನಮ್ಮವನು. ಭಾಷೆ ಮತ್ತು ನೆಲದ ವಿಚಾರದಲ್ಲಿ ಅವರ ಸಾಧನೆಯನ್ನು ಒಂದು ಪ್ರದೇಶಕ್ಕೆ ಸೀಮಿತವಾಗಿಸುವುದು ಬೇಡ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ:D Gukesh: 7ನೇ ವಯಸ್ಸಿನಲ್ಲಿ ಚೆಸ್‌ ಕಲಿಕೆ, 18 ವರ್ಷಕ್ಕೆ ವಿಶ್ವ ಚಾಂಪಿಯನ್‌! ಗುಕೇಶ್‌ ಆರಂಭಿಕ ಜೀವನ ಹೇಗಿತ್ತು?