Monday, 14th October 2024

ಗುಲಾಬ್ ಚಂಡಮಾರುತ: ಆಂಧ್ರ, ಒಡಿಸಾದಲ್ಲಿ ಭಾರಿ ಮಳೆ ಸಾಧ್ಯತೆ

ನವದೆಹಲಿ: ಆಂಧ್ರ ಪ್ರದೇಶದ ಉತ್ತರ ಮತ್ತು ದಕ್ಷಿಣ ಒಡಿಶಾದ ಕರಾವಳಿ ಭಾಗದಲ್ಲಿ ಭಾನುವಾರ ಸಂಜೆ ಚಂಡಮಾರುತ ಅಪ್ಪಳಿಸಲಿದೆ.

ಗಂಟೆಗೆ 95 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮುನ್ನೆ ಚ್ಚರಿಕೆ ನೀಡಿದೆ. ಚಂಡಮಾರುತಕ್ಕೆ ‘ಗುಲಾಬ್​’ ಎಂದು ಹೆಸರಿಡ ಲಾಗಿದೆ. ಶನಿವಾರ ಮಧ್ಯಾಹ್ನ ಬಂಗಾಳ ಕೊಲ್ಲಿಯಲ್ಲಿ ತೀವ್ರವಾದ ವಾಯುಭಾರ ಕುಸಿತ ಉಂಟಾಗಿರುವುದರಿಂದ ಈ ಚಂಡ ಮಾರುತ ಸೃಷ್ಟಿಯಾಗಿದೆ. ಭಾನುವಾರ ಕಾಳಿಂಗಪಟ್ನಂ, ವಿಶಾಖಪಟ್ನಂ ಮತ್ತು ಗೋಪಾಲಪುರ ಪ್ರದೇಶಗಳಲ್ಲಿ ಭೂ ಕುಸಿತ ಸಂಭವಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಒಡಿಶಾ ಮತ್ತು ಆಂಧ್ರ ಪ್ರದೇಶದ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗುವ ಹಿನ್ನೆಲೆ, ರೆಡ್​ ಅಲರ್ಟ್​ ಘೋಷಿಸಿದೆ. ಜೊತೆಗೆ ಸೋಮವಾರ ಛತ್ತೀಸ್​ಗಡದ ದಕ್ಷಿಣ ಭಾಗದಲ್ಲೂ ಅಧಿಕ ಮಳೆಯಾಗಲಿದ್ದು, ಅಲ್ಲಿಯೂ ರೆಡ್​ ಅಲರ್ಟ್​ ನೀಡಿದೆ.  ಭಾರೀ ಮಳೆಗೆ ವಿದ್ಯುತ್​ ಸಂಪರ್ಕ ಕಡಿತವಾಗಲಿದೆ. ಬೆಳೆಗಳೂ ಸಹ ನಾಶವಾಗಲಿವೆ ಎಂದು ಐಎಂಡಿ ಮುನ್ನೆಚ್ಚರಿಕೆ ನೀಡಿದೆ.

ಇದರೊಂದಿಗೆ, ಸೆ.29ರಂದು ವಿದರ್ಭ, ತೆಲಂಗಾಣ, ಮಾರತ್​ವಾಡ, ಕೊಂಕಣ ಕರಾವಳಿ ಮುಂಬೈ ಮತ್ತು ಗುಜರಾತ್​​ನಲ್ಲಿ ಭಾರೀ ಮಳೆಯಾಗಲಿದ್ದು, ಈ ಪ್ರದೇಶಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.

ಸೆ.28ರ ಸಂಜೆಯಿಂದ ಗುಲಾಬ್​ ಚಂಡಮಾರುತದ ಪ್ರಭಾವ ಹೆಚ್ಚಾಗಲಿದೆ. ಕೊಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳ, ಒಡಿಶಾ, ಉತ್ತರ ಮತ್ತು ಮಧ್ಯ ಭಾರತದ ಕೆಲವು ಪ್ರದೇಶಗಳು, ಉತ್ತರ ಪ್ರದೇಶ ಮತ್ತು ದೆಹಲಿ-ಎನ್​ಸಿಆರ್​ನಲ್ಲಿ ಅಧಿಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಂಡಮಾರುತದ ಪರಿಣಾಮ, ಸೆ.27ರವರೆಗೆ ಭಾರತೀಯ ರೈಲ್ವೆ ಇಲಾಖೆಯು ಹಲವು ಮಾರ್ಗ ಗಳ ರೈಲ್ವೆ ಸಂಚಾರವನ್ನು ರದ್ದು ಮಾಡಿದೆ. ಭಾರತೀಯ ರೈಲ್ವೆಯ ಪೂರ್ವ ಕರಾವಳಿ ರೈಲ್ವೆ ವಲಯ ಪ್ರಕಟಣೆಯಲ್ಲಿ ಹೇಳಿದೆ. ಗುಲಾಬ್ ಚಂಡಮಾರುತದ ಪ್ರಭಾವದಿಂದಾಗಿ ಸೆಪ್ಟೆಂಬರ್ 27ರ ವರೆಗೆ ಕೆಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ರೈಲುಗಳ ಕಾರ್ಯಾಚರಣೆಯನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಗುಲಾಬ್ ಚಂಡಮಾರುತವು ಅಪ್ಪಳಿಸುವುದರಿಂದ, ಆ ಭಾಗಗಳಿಗೆ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.