Wednesday, 11th December 2024

ಬಿಹಾರದಲ್ಲೂ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ನಿಷೇಧಿಸಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಒತ್ತಾಯ

ವದೆಹಲಿ: ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮೇಲೆ ಯುಪಿ ಸರ್ಕಾರ ನಿಷೇಧ ಹೇರಿದ ನಂತರ ಬಿಹಾರದಲ್ಲೂ ನಿಷೇಧವನ್ನು ಜಾರಿಗೆ ತರುವಂತೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.

ನಿತೀಶ್‌ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಹಲಾಲ್‌ ಪ್ರಮಾಣೀಕೃತ ಉತ್ಪನ್ನಗಳ ಉತ್ಪಾದನೆ ಮತ್ತು ಮಾರಾಟದ ಹಿಂದೆ ರಾಷ್ಟ್ರ ವಿರೋಧಿ ಪಿತೂರಿ ಇದೆ. ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಮಾರಾಟ ಮಾಡುವುದು ಧರ್ಮಕ್ಕೆ ಯಾವುದೇ ಸಂಬಂಧವಿಲ್ಲದ ಉತ್ಪನ್ನಗಳ ಮೇಲೆ ಇಸ್ಲಾಮಿಕ್ ತತ್ವಗಳನ್ನು ಹೇರುವ ಪಿತೂರಿ ಎಂದು ಹೇಳಿದ್ದಾರೆ. ಕೆಲವು ಸಂಸ್ಥೆಗಳು ಹಲಾಲ್ ಪ್ರಮಾಣಪತ್ರಗಳನ್ನು ನೀಡುವಲ್ಲಿ ಸ್ವಯಂಘೋಷಿತ ಅಧಿಕಾರಿಗಳಂತೆ ವರ್ತಿಸುತ್ತಿವೆ ಎಂದು ಅವರು ಆರೋಪಿಸಿದರು.

ಹಲಾಲ್ ಪ್ರಮಾಣೀಕರಣ ಮತ್ತು ವ್ಯವಹಾರದ ಹಿಂದೆ ಮಹತ್ವದ ಪಿತೂರಿ ಇರಬಹುದೆಂಬ ಆತಂಕವು ಆಧಾರರಹಿತವಲ್ಲ. ಹಲಾಲ್ ಪ್ರಮಾಣೀ ಕರಣದ ವಿರುದ್ಧ ಉತ್ತರ ಪ್ರದೇಶ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಉಲ್ಲೇಖಿಸಿದ ಸಚಿವರು, ಬಿಹಾರದ ಮುಖ್ಯಮಂತ್ರಿಯನ್ನು ರಾಜ್ಯದಲ್ಲಿಯೂ ಇದೇ ರೀತಿಯ ಕಠಿಣ ಕ್ರಮಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿದರು.

“ಬಿಹಾರದಂತಹ ಮಹತ್ವದ ರಾಜ್ಯದಲ್ಲಿಯೂ ಸಹ ಹಲಾಲ್ ಉತ್ಪನ್ನಗಳ ಹೆಸರಿನಲ್ಲಿ ನಡೆಯುತ್ತಿರುವ ಚಳುವಳಿಗಳ ಮೇಲೆ ನಿಷೇಧ ಹೇರುವ ಮೂಲಕ ಇಂತಹ ವಿಭಜಕ ಮತ್ತು ಪಿತೂರಿ ಅಂಶಗಳ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ನಾನು ನಿಮ್ಮನ್ನು ಒತ್ತಾಯಿಸುತ್ತೇನೆ” ಎಂದು ಸಚಿವರು ಹೇಳಿದ್ದಾರೆ.

ಇತ್ತೀಚೆಗೆ ಯೋಗಿ ಆದಿತ್ಯನಾಥ್ ಸರ್ಕಾರವು ತಕ್ಷಣದಿಂದಲೇ ಜಾರಿಗೆ ಬರುವಂತೆ ಯುಪಿಯಲ್ಲಿ ಡೈರಿ, ಗಾರ್ಮೆಂಟ್ಸ್ ಮತ್ತು ಔಷಧಗಳು ಸೇರಿದಂತೆ ಕೆಲವು ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ವಿತರಣೆ ಮತ್ತು ಮಾರಾಟದ ಮೇಲೆ ನಿಷೇಧ ಹೇರಿತು. ನಿಷೇಧವು ರಫ್ತಿಗಾಗಿ ತಯಾರಿಸಿದ ಉತ್ಪನ್ನಗಳನ್ನು ಹೊರತುಪಡಿಸಿದೆ.