Friday, 13th December 2024

ಹಲ್ದೀರಾಮ್ಸ್’ನ ತಿನಿಸು ಪ್ಯಾಕೆಟ’ನಲ್ಲಿ ಉರ್ದು ಭಾಷೆ: ವಾಗ್ವಾದ ವೈರಲ್‌

ನವದೆಹಲಿ: ಆಹಾರ ತಯಾರಿಕಾ ಕಂಪೆನಿ ಹಲ್ದೀರಾಮ್ಸ್’ನ ತಿನಿಸು ಪ್ಯಾಕೆಟ’ನಲ್ಲಿ ಉರ್ದು ಭಾಷೆಯಲ್ಲಿ ಬರೆದಿರುವುದನ್ನು ಪ್ರಶ್ನಿಸಿ ಟಿವಿ ಪತ್ರಕರ್ತೆ ಯೊಬ್ಬರು ಸ್ಟೋರ್ ಮ್ಯಾನೇಜರ್ ಒಬ್ಬರೊಂದಿಗೆ ವಾಗ್ವಾದಕ್ಕಿಳಿದ ಘಟನೆ ನಡೆದಿದೆ. ಘಟನೆಯ ನಂತರ ಹಲ್ದೀರಾಮ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ.

ಈ ರೀತಿ ಉರ್ದು ಭಾಷೆಯಲ್ಲೂ ತಿನಿಸು ಪ್ಯಾಕೆಟ್‍ಗಳಲ್ಲಿ ಬರೆದು “ನವರಾತ್ರಿ ಉಪವಾಸದಲ್ಲಿರುವ ಹಿಂದುಗಳಿಗೆ ದ್ರೋಹವೆಸಗಲಾಗುತ್ತದೆ” ಎಂದು ಪತ್ರಕರ್ತೆ ಸ್ಟೋರ್ ಮ್ಯಾನೇಜರ್ ಜತೆಗೆ ಜಗಳವಾಡು ತ್ತಿದ್ದಂತೆಯೇ, ನೀವು ಏನು ಬೇಕಾದರೂ ಮಾಡಿ ಮ್ಯಾಡಂ, ಹಲ್ದೀರಾಮ್ಸ್ ಇಂತಹ ವಿಚಾರಕ್ಕೆ ಕಿವಿ ಗೊಡುವುದಿಲ್ಲ ಎಂದು ಹೇಳಿದ್ದಾರೆ.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ಯಾಕೆಟ್‍ನಲ್ಲಿ ಅರಬಿಕ್ ಭಾಷೆಯಲ್ಲಿ ಬರೆಯಲಾಗಿದೆ ಹಾಗೂ ಉತ್ಪನ್ನವನ್ನು ಮಧ್ಯಪೂರ್ವ ದೇಶಗಳಿಗೆ ರಫ್ತು ಮಾಡಲಾಗುತ್ತಿರುವುದರಿಂದ ಅರಬಿಕ್ ಭಾಷೆಗಳಲ್ಲಿ ಬರೆಯಲಾಗಿದೆ ಎಂದು ಕೆಲವರು ವಾದವಾದರೆ ಇನ್ನು ಕೆಲವರು ಭಾರತೀಯ ರೈಲ್ವೆಯ ಸೂಚನಾ ಫಲಕಗಳಿಂದ ಹಿಡಿದು ಕರೆನ್ಸಿ ನೋಟುಗಳಲ್ಲಿಯೂ ಉರ್ದು ಬರಹವಿರುವುದನ್ನು ಉಲ್ಲೇಖಿಸಿದ್ದಾರೆ.

ಹಲ್ದಿ ರಾಮ್ ಕೂಡ ದೇಶ ವಿರೋಧಿಯಾಗಿ ಬಿಟ್ಟ ಎಂದು ಟ್ವಿಟ್ಟರಿಗರು ಪ್ರತಿಕ್ರಿಯಿಸಿದರೆ, ಕರೆನ್ಸಿ ನೋಟಿನಲ್ಲಿರುವ ಉರ್ದು ಬರಹವನ್ನು ಉಲ್ಲೇಖಿಸಿ ಈಗ ಭಾರತೀಯ ಕರೆನ್ಸಿಯನ್ನು ಬಹಿಷ್ಕರಿಸೋಣ ಎಂದು ಹೇಳುವ ಮೂಲಕ ಮಾರ್ಮಿಕವಾಗಿ ತಿರುಗೇಟು ನೀಡಿದ್ದಾರೆ.