Wednesday, 11th December 2024

ನೀರಿನ ಪೋಲು ತಪ್ಪಿಸಲು ’ಅರ್ಧ ಗ್ಲಾಸ್‌ ನೀರು’ ಯೋಜನೆ…!

ಇಂದೋರ್‌: ಸ್ವಚ್ಛ ನಗರಗಳಲ್ಲಿ ಒಂದಾಗಿರುವ ಮತ್ತು ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಮೆಚ್ಚುಗೆ ಗಳಿಸಿರುವ ಮಧ್ಯ ಪ್ರದೇಶದ  ‘ಇಂದೋರ್‌’ ನಗರದ ಹೋಟೆಲ್‌ಗಳು ಕೇವಲ ಅರ್ಧ ಗ್ಲಾಸ್‌ ನೀರು ಕೊಡುವ ನಿರ್ಧಾರ ಮಾಡಿವೆ.

ಕುಡಿಯುವ ನೀರಿನ ಸಂರಕ್ಷಣೆ ಜತೆಗೆ ಕುಡಿಯುವ ನೀರು ವ್ಯರ್ಥ ಆಗುವುದನ್ನು ತಡೆಯಲು ಕ್ರಮ ಜಾರಿಗೆ ತರಲಾಗುತ್ತಿದೆ.

ಯೋಜನೆಗೆ ‘ಜಲಹಾತ್‌ ಜನ ಅಭಿಯಾನ’ ಹೆಸರಿಡಲಾಗಿದ್ದು, ಅರ್ಧ ಗ್ಲಾಸ್‌ ಕಂಡಾಕ್ಷಣ ಹೋಟೆಲ್‌ ಗ್ರಾಹಕರಿಗೆ ನೀರಿನ ಮಹತ್ವದ ಅರಿವಾಗಲಿದೆ ಎನ್ನುವುದು ನಗರಾಡಳಿತದ ಚಿಂತನೆ.

ಕೆರೆ, ಬಾವಿ, ಬೋರ್‌ವೆಲ್‌, ನದಿಗಳಂತಹ ನೀರಿನ ಮೂಲಗಳ ಇತಿಮಿತಿಯ ಬಳಕೆಯ ಬಗ್ಗೆ ಜನರಲ್ಲಿ ಸದಾಕಾಲ ಎಚ್ಚರವಿರ ಬೇಕು. ಅವರಿಗೆ ಅರ್ಧ ಗ್ಲಾಸ್‌ ಕುಡಿಯುವ ನೀರು ಮಾತ್ರವೇ ಸಿಗುವಂತಹ ಪರಿಸ್ಥಿತಿ ಮುಂದೆ ಎದುರಾಗಬಹುದು ಎಂಬ ಮುನ್ನೆಚ್ಚರಿಕೆ ಕೂಡ ಇರಬೇಕಾಗುತ್ತದೆ.

ಆಗ ಮಿತವ್ಯಯದ ಜತೆಗೆ ನೀರಿನ ಪೋಲು ತಡೆಯಬಹುದು ಎಂದು ಓಜಸ್‌ ಪ್ರತಿಷ್ಠಾನ ನೇತೃತ್ವ ವಹಿಸಿರುವ ಜಲಹಾತ್‌ ಅಭಿಯಾನಕ್ಕೆ ಚಾಲನೆ ನೀಡಿದ ಮಧ್ಯಪ್ರದೇಶ ಜಲಸಂಪನ್ಮೂಲ ಸಚಿವ ತುಳಸಿ ರಾಮ್‌ ಸಿಲಾವತ್‌ ಹೇಳಿದ್ದಾರೆ.