Wednesday, 11th December 2024

Haryana Elections 2024: ಕಾಂಗ್ರೆಸ್ ಅಭ್ಯರ್ಥಿಗಳ ಪರ ಕ್ರಿಕೆಟಿಗ ಸೆಹವಾಗ್‌ ಭರ್ಜರಿ ಪ್ರಚಾರ

Haryana election 2024

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಡ್ಯಾಶಿಂಗ್‌ ಆರಂಭಿಕ ಆಟಗಾರ ವಿರೇಂದ್ರ ಸೆಹವಾಗ್‌(Virender Sehwag) ಅವರು ಹರಿಯಾಣ ಚುನಾವಣ(Haryana Elections 2024) ಪ್ರಚಾರ ನಡೆಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದುವರೆಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಯೋಜನೆಗಳಿಗೆ ಬೆಂಬಲ ಸೂಚಿಸುತ್ತಿದ್ದ ಸೆಹವಾಗ್‌, ಕಾಂಗ್ರೆಸ್ ಅಭ್ಯರ್ಥಿ ಅನಿರುದ್ಧ ಚೌಧರಿ(Anirudh Chaudhary) ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಸೆಹವಾಗ್‌ ಪ್ರಚಾರದ ವಿಡಿಯೊ ವೈರಲ್‌ ಆಗಿದೆ.

ಪ್ರಚಾರ ಸಭೆಯಲ್ಲಿ ಮಾತನಾಡಿದ ಸೆಹವಾಗ್‌, ಸ್ಟೇಡಿಯಂಗಿಂತ ಹೆಚ್ಚು ಜನ ಇಲ್ಲಿ ಸೇರಿದ್ದೀರಿ. ಇಲ್ಲಿ ಸೇರಿರುವ ಎಲ್ಲರೂ ಮತಯಂತ್ರದಲ್ಲಿ ಚೌಧರಿ ಹೆಸರಿನ ಮುಂದೆ ಬಟನ್ ಒತ್ತಿದರೆ ಗೆಲುವು ನಮ್ಮದಾಗಲಿದೆ. ನಿಮ್ಮ ಮೇಲೆ ವಿಶ್ವಾಸವಿದೆ. ಈ ಬಾರಿ ಚೌಧರಿ ಅವರು ಮತಗಳ ಸಿಕ್ಸರ್‌ ಬಾರಿಸುವ ಮೂಲಕ ಗೆಲುವು ದಾಖಲಿಸಬೇಕು ಎಂದು ಸೆಹವಾಗ್‌ ಹೇಳಿದರು. ಕೆಲ ದಿನಗಳ ಹಿಂದೆಯೇ ಸೆಹವಾಗ್‌ ಅವರು ಅನಿರುದ್ಧ ಚೌಧರಿ ಪ್ರಚಾರದ ವಿಡಿಯೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಇದೀಗ ಫೀಲ್ಡ್‌ಗೆ ಇಳಿದು ಮತಯಾಚನೆ ಆರಂಭಿಸಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸೆಹವಾಗ್‌ಗೆ ಬಿಜೆಪಿ ಟಿಕೆಟ್ ಆಫರ್ ನೀಡಿತ್ತು. ಆದರೆ ಆ ವೇಳೆ ಸೆಹವಾಗ್‌ ಟಿಕೆಟ್ ಆಫರ್ ತಿರಸ್ಕರಿಸಿ ಮೋದಿಗೆ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದರು. ಇದೀಗ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ Savitri Jindal: ಹರಿಯಾಣ ವಿಧಾನಸಭಾ ಚುನಾವಣೆ; ʼಟಾರ್ಚ್‌ʼ ಹಿಡಿದು ಕಣಕ್ಕಿಳಿದ ದೇಶದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌

ಸೆಹವಾಗ್‌ ಕೆಲವು ದಿನಗಳ ಹಿಂದೆ ಮೋದಿ ಸರ್ಕಾರವನ್ನು ಪ್ರಶ್ನಿಸಿ ಹಲವು ಟ್ವೀಟ್‌ ಮಾಡಿದ್ದರು. ಇದೇ ಕಾರಣಕ್ಕೆ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟೀಕೆ ಎದುರಿಸಿದ್ದರು. ಪಿಎಸ್‌ಯು ಬ್ಯಾಂಕ್‌ಗಳ ದೃಢತೆಯ ಬಗ್ಗೆ ಪ್ರಧಾನಿ ಮೋದಿ ಅವರ ಪೋಸ್ಟ್ ಟೀಕಿಸಿ ವಿರೋಧಿಸಿ ಪ್ರಶ್ನಿಸಿದ್ದರು. ಇದೀಗ ಕಾಂಗ್ರೆಸ್‌ ಪರ ಪ್ರಚಾರ ಮಾಡಿ ಬಿಜೆಪಿಗೆ ಟಾಂಗ್‌ ಕೊಟ್ಟಂತಿದೆ.

90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಚುನಾವಣೆ ಅಕ್ಟೋಬರ್ 5ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್‌ 8ರಂದು ಫಲಿತಾಂಶ ಪ್ರಕಟವಾಗಲಿದೆ.

ಸೆಹವಾಗ್​ ಅವರು 14 ವರ್ಷದ ಕ್ರಿಕೆಟ್​ ಬಾಳ್ವೆಯಲ್ಲಿ 17,000 ಸಾವಿರಕ್ಕೂ ಅಧಿಕ ಅಂತಾರಾಷ್ಟ್ರಿಯ ರನ್​ ಬಾರಿಸಿದ್ದಾರೆ. ಭಾರತ ಪರ ಟೆಸ್ಟ್​ನಲ್ಲಿ ತ್ರಿಶತಕ ​ ಬಾರಿಸಿದ ಮೊದಲ ಆಟಗಾರ ಎಂಬ ಹಿರಿಮೆಯೂ ಇವರದ್ದಾಗಿದೆ. ಸಚಿನ್​ ಬಳಿಕ ಏಕದಿನದಲ್ಲಿ ದ್ವಿಶತಕ ಬಾರಿಸಿದ ದ್ವಿತೀಯ ಆಟಗಾರನೂ ಹೌದು. ಒಟ್ಟು 251 ಏಕದಿನ ಪಂದ್ಯ ಆಡಿ 8273 ರನ್​ ಬಾರಿಸಿದ್ದಾರೆ. 15 ಶತಕ, 1 ದ್ವಿಶತಕ ಮತ್ತು 38 ಅರ್ಧಶತಕ ಬಾರಿಸಿದ್ದಾರೆ. ಟೆಸ್ಟ್​ನಲ್ಲಿ 8586 ರನ್​, 23 ಶತಕ 6 ದ್ವಿಶತಕ 2 ತ್ರಿಶತಕ ಬಾರಿಸಿದ್ದಾರೆ.

ಟಿ20 ಕ್ರಿಕೆಟ್​ನಲ್ಲಿ ಭಾರತ ತಂಡವನ್ನು ಮೊದಲ ಬಾರಿ ನಾಯಕನಾಗಿ ಮುನ್ನಡೆಸಿದ ಕೀರ್ತಿಯೂ ಇವರದ್ದಾಗಿದೆ. 19 ಟಿ20 ಪಂದ್ಯಗಳಿಂದ 394 ರನ್​ ಬಾರಿಸಿದ್ದಾರೆ. ಐಪಿಎಲ್​ನಲ್ಲಿಯೂ ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ 2728 ರನ್​ ಬಾರಿಸಿದ್ದಾರೆ. 2 ಶತಕ ಕೂಡ ಒಳಗೊಂಡಿದೆ.