Friday, 13th December 2024

Haryana Election result 2024: ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಅನಿರೀಕ್ಷಿತ ಸೋಲು; ಈ ಹಿನ್ನಡೆಗೆ ಕಾರಣವೇನು?

Haryana assembly election

ಚಂಡೀಗಢ: ಹರಿಯಾಣದ ಫಲಿತಾಂಶ(Haryana Election result 2024) ದಲ್ಲಿ ಅನಿರೀಕ್ಷಿತ ಬದಲಾವಣೆಯಾಗಿದ್ದು, ಕೇವಲ ಒಂದೇ ಒಂದು ಗಂಟೆಯಲ್ಲಿ ರಿಸಲ್ಟ್‌ ಉಲ್ಟಾ ಆಗಿದೆ. ಮತ ಎಣಿಕೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ಸ್ಥಾನಗಳು ನೋಡ ನೋಡ್ತಿದ್ದಂತೆ ಒಂದೇ ಸಮನೇ ಏರಿಕೆ ಆಗಿತ್ತು. ಮತ ಎಣಿಕೆ ಆರಂಭದೊಂಡ ಕೆಲವೇ ಗಂಟೆಗಳಲ್ಲಿ 50ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡು ಕ್ಲೀನ್‌ ಸ್ವೀಪ್‌ನತ್ತ ದಾಪುಗಾಲಿಡುತ್ತಿತ್ತು. ಇನ್ನೇನು ಸರಳ ಬಹುಮತ ಪಡೆದು ಕಾಂಗ್ರೆಸ್‌ ಬರೋಬ್ಬರಿ ದಶಕದ ನಂತರ ಗದ್ದುಗೆ ಏರುವುದು ಖಚಿತ ಎನ್ನುವಾಗಲೇ ಫಲಿತಾಂಶ ಸಂಪೂರ್ಣ ತಲೆಕೆಳಗಾಗಿದೆ. ಆ ಮೂಲಕ ಗಂಟೆಯೊಳಗೆ ಟ್ರೆಂಡ್ ಚೇಂಜ್ ಆಗಿದ್ದು, ಸಂಭ್ರಮಿಸುತ್ತಿದ್ದ ಕಾಂಗ್ರೆಸ್ ಕಚೇರಿಯಲ್ಲಿ ಶೋಕ, ದುಃಖ ಆವರಿಸಿದ್ದ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆದಿದೆ. ಹಾಕಿದ್ದರೆ ಹರಿಯಾಣದಲ್ಲಿ ಸಮೀಕ್ಷೆಗಳು ತಲೆಕೆಳಗಾಗಿ ಕಾಂಗ್ರೆಸ್‌ ಹಿನ್ನಡೆ ಅನುಭವಿಸಲು ಕಾರಣ ಏನು?

ಕಾಂಗ್ರೆಸ್ ಹಿನ್ನಡೆಗೆ ಕಾರಣವಾದ ಐದು ಅಂಶಗಳು ಇಲ್ಲಿವೆ

ಕಾಂಗ್ರೆಸ್ ಒಳ ಜಗಳ: ಕಾಂಗ್ರೆಸ್‌ ಹಿನ್ನಡೆಗೆ ಪಕ್ಷದ ಆಂತರಿಕ ಕಲಹ ಮತ್ತು ಅದರ ಉನ್ನತ ನಾಯಕರು ಅಧಿಕಾರಕ್ಕಾಗಿ ಕಿತ್ತಾಡುತ್ತಿರುವುದು ಪ್ರಮುಖ ಕಾರಣವಾಗಿದೆ. ಚುನಾವಣೆಗೂ ಮುನ್ನವೇ ಕಾಂಗ್ರೆಸ್ ನಾಯಕರು ಗೆಲುವು ಖಚಿತ ಎಂದು ಹೇಳಿಕೊಂಡು ಮುಖ್ಯಮಂತ್ರಿ ಹುದ್ದೆಗಾಗಿ ಕಸರತ್ತು ಆರಂಭಿಸಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕ ಭೂಪಿಂದರ್ ಸಿಂಗ್ ಹೂಡಾ ಮತ್ತು ಹಿರಿಯ ನಾಯಕಿ ಕುಮಾರಿ ಸೆಲ್ಜಾ ನಡುವಿನ ಅಧಿಕಾರದ ಜಗಳ ಬಹಿರಂಗವಾಗಿಯೇ ನಡೆಯುತ್ತಿತ್ತು. ಚುನಾವಣೆಯ ಪೂರ್ವದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಕಾಂಗ್ರೆಸ್ ಹೆಣಗಾಡುತ್ತಿರುವಾಗ ಪಕ್ಷದ ಹಿರಿಯ ನಾಯಕರು ಬಹಿರಂಗವಾಗಿಯೇ ಅಧಿಕಾರಕ್ಕಾಗಿ ಕಿತ್ತಾಡುತಿದ್ದರು.

ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ: ಹರಿಯಾಣದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಅತಿ ಹೆಚ್ಚಿದೆ. ಇದರಿಂದಾಗಿಯೇ ಮತಗಳು ಹಂಚಿಕೆಯಾಗಿದ್ದು, ಕಾಂಗ್ರೆಸ್‌ಗೆ ಇದು ಬಹುದೊಡ್ಡ ಹೊಡೆತ ನೀಡಿದೆ. ಮತ ಹಂಚಿಕೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಸ್ವಲ್ಪ ಮುಂದಿದೆ. ಆದರೆ ಅದನ್ನು ಸ್ಥಾನಗಳಾಗಿ ಪರಿವರ್ತಿಸುವಲ್ಲಿ ಅದು ಹೆಚ್ಚು ಯಶಸ್ವಿಯಾಗಲಿಲ್ಲ. ಆದರೆ ಈ ಬಾರಿಯ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಅಂಕ ಗಳಿಸುವಲ್ಲಿ ವಿಫಲವಾಗಿವೆ.

ಜಾಟ್ ವಿರೋಧಿ ಬಲವರ್ಧನೆ: ಹೂಡಾ ನೇತೃತ್ವದ ಕಾಂಗ್ರೆಸ್ ಜಾಟ್ ಮತಗಳ ಮೇಲೆ ಕೇಂದ್ರೀಕರಿಸಿದರೆ, ಬಿಜೆಪಿ ಪರವಾಗಿ ಜಾಟ್-ಯೇತರ ಮತಗಳನ್ನು ಕ್ರೋಢೀಕರಿಸುವಲ್ಲಿ ಯಶಸ್ವಿಯಾಗಿದೆ. ಪ್ರಭಾವಿ ಸಮುದಾಯವಾಗಿರುವ ಜಾಟಾ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಕಾಂಗ್ರೆಸ್‌ ಯಶಸ್ವಿಯಾದರೂ ಜಾಟ್‌ ವಿರೋಧಿ ಸಮುದಾಯಗಳು ಒಗ್ಗಟ್ಟಾಗಿ ಬಿಜೆಪಿ ಪರ ಮತ ಚಲಾಯಿಸಿವೆ.

ಬಿಜೆಪಿಯ ತೆರೆಮರೆಯ ಕೆಲಸ: ಮೂರನೇ ಬಾರಿ ಅಧಿಕಾರದ ಗದ್ದುಗೆ ಏರಲೇಬೇಕೆಂದು ಪಣ ತೊಟ್ಟಿದ್ದ ಬಿಜೆಪಿಯು ತೆರೆಮರೆಯಲ್ಲಿ ಬಹಳಷ್ಟು ಕೆಲಸ ಮಾಡಿದೆ. ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್ ಅವರಿಗೆ ಚುನಾವಣೆಯ ವೇಳೆ ಪಕ್ಷದ ಪ್ರಚಾರದ ಜವಾಬ್ದಾರಿಯನ್ನು ವಹಿಸಲಾಗಿತ್ತು. ಬಿಜೆಪಿಯ ಚುನಾವಣಾ ತಂತ್ರವು ಮತ್ತೊಮ್ಮೆ ಕಾಂಗ್ರೆಸ್‌ನ ಮುಷ್ಠಿಯಿಂದ ಗೆಲುವವನ್ನು ಕೊನೆಯ ಕ್ಷಣದಲ್ಲಿ ಕಸಿದುಕೊಂಡಿದೆ.

ಬಿಜೆಪಿಯ ನಗರ ಪ್ರಾಬಲ್ಯ: ಕಳೆದ ದಶಕದಲ್ಲಿ, ಹರಿಯಾಣದ ನಗರ ಪ್ರದೇಶಗಳಾದ ಗುರ್ಗಾಂವ್ ಮತ್ತು ಫರಿದಾಬಾದ್‌ನಲ್ಲಿ ಬಿಜೆಪಿ ಬೆಂಬಲವನ್ನು ಕ್ರೋಢೀಕರಿಸಿದೆ. ಕಾಂಗ್ರೆಸ್ ಗ್ರಾಮಾಂತರ ಪ್ರದೇಶವನ್ನು ಕೇವಲ ಗ್ರಾಮಾಂತರ ಪ್ರದೇಶಗಳನ್ನೇ ಕೇಂದ್ರೀಕರಿಸಿತ್ತು. ಇದು ಪಕ್ಷಕ್ಕೆ ಬಹುದೊಡ್ಡ ಮಟ್ಟದ ಹೊಡೆತ ನೀಡಿತು.

ಈ ಸುದ್ದಿಯನ್ನೂ ಓದಿ: Election Result 2024: ಹರಿಯಾಣದಲ್ಲಿ ಹ್ಯಾಟ್ರಿಕ್‌ನತ್ತ ಬಿಜೆಪಿ ದಾಪುಗಾಲು; ಕಮಲಪಾಳಯದಲ್ಲಿ ಗೆಲುವಿನ ನಗೆ